ಸಾಕ್ಷಿಗೆ 2.5 ಕೋ.ರೂ. ಬಹುಮಾನ ನೀಡಲಾಗಿದೆ: ಹರ್ಯಾಣದ ಕ್ರೀಡಾ ಸಚಿವ ವಿಜ್

ಚಂಡೀಗಡ, ಮಾ.5: ತಾನು ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ಸಂದರ್ಭದಲ್ಲಿ ಹರ್ಯಾಣ ಸರಕಾರ ನೀಡಿರುವ ಭರವಸೆಯನ್ನು ಇನ್ನೂ ಈಡೇರಿಸಿಲ್ಲ ಎಂಬ ಸಾಕ್ಷಿ ಮಲಿಕ್ ಹೇಳಿಕೆಯನ್ನು ರಾಜ್ಯದ ಕ್ರೀಡಾ ಸಚಿವ ಅನಿಲ್ ವಿಜ್ ನಿರಾಕರಿಸಿದ್ದಾರೆ.
‘‘ಸಾಕ್ಷಿ ಮಲಿಕ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡು ಭಾರತಕ್ಕೆ ಕಾಲಿಟ್ಟ ತಕ್ಷಣವೇ ನಾವು 2.5 ಕೋಟಿ ರೂ. ಚೆಕ್‌ನ್ನು ಹಸ್ತಾಂತರಿಸಿದ್ದೇವೆ. ಅವರು ರೋಹ್ಟಕ್‌ನ ಮಹರ್ಷಿ ದಯಾನಂದ ಯುನಿವರ್ಸಿಟಿ(ಎಂಡಿಯು)ಯಲ್ಲಿ ಉದ್ಯೋಗ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ಇಡೀ ಪ್ರಕ್ರಿಯೆ ಮುಗಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಎಂಡಿಯು ನಿಯಮವನ್ನು ರೂಪಿಸಿದ್ದು, ಸಾಕ್ಷಿ ಅವರನ್ನು ಎಂಡಿಯು ಕ್ರೀಡಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗುತ್ತದೆ. ಕ್ರೀಡೆಯಲ್ಲಿನ ರಾಜಕೀಯವು ರಾಜಕಾರಣಿಗಳ ರಾಜಕೀಯಕ್ಕಿಂತಲೂ ಹೆಚ್ಚಾಗಿರುತ್ತದೆ. ಅದು ನಮಗೆ ಅರ್ಥವಾಗುವುದಿಲ್ಲ’’ಎಂದು ಕ್ರೀಡಾ ಸಚಿವರು ತಿಳಿಸಿದ್ದಾರೆ.
ಸಾಕ್ಷಿಗೆ ಇನ್ನು 3-4 ದಿನಗಳಲ್ಲಿ ನೇಮಕಾತಿ ಪತ್ರ ನೀಡಲಾಗುವುದು. ಇದೆಲ್ಲವೂ ಅವರಿಗೆ ಚೆನ್ನಾಗಿ ಗೊತ್ತಿದೆ. ಸಾಕ್ಷಿ ತನ್ನ ಕೋಚ್‌ಗಳಿಗೆ ಗೌರವ ನೀಡಲಾಗಿಲ್ಲ ಎಂದು ಹೇಳಿದ್ದಾರೆ. ಅವರಲ್ಲಿ ಕೋಚ್ ಹೆಸರನ್ನು ನೀಡುವಂತೆ ಸೂಚಿಸಲಾಗಿತ್ತು. ಆಕೆಯ ತಾನು ತರಬೇತಿ ಪಡೆದಿದ್ದ 3-4 ಕೋಚ್ ಹೆಸರನ್ನು ನೀಡಿದ್ದರು. ಒಬ್ಬ ಕೋಚ್ ಹೆಸರನ್ನು ಪ್ರಮಾಣಪತ್ರದೊಂದಿಗೆ ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಈತನಕ ಆ ಕೆಲಸ ಮಾಡಿಲ್ಲ. ಎಲ್ಲ ಕೋಚ್‌ಗಳಿಂದ ಬಹುಮಾನ ನೀಡಲು ನಮ್ಮಿಂದ ಸಾಧ್ಯವಿಲ್ಲ’’ ಎಂದು ವಿಜ್ ಹೇಳಿದ್ದಾರೆ.
ರಿಯಾಯತಿ ದರದಲ್ಲಿ ನಿವೇಶನ ಖರೀದಿಸುವ ಬಗ್ಗೆ ಸಾಕ್ಷಿ ಅವರು ಹರ್ಯಾಣದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ತನಕ ಅರ್ಜಿ ಸಲ್ಲಿಸಿಲ್ಲ. ರಾಜ್ಯ ಸರಕಾರ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ರಿಯಾಯತಿ ದರದಲ್ಲಿ ನಿವೇಶನ ನೀಡಲು ಬಯಸಿದೆ. ಸಾಕ್ಷಿ ಮಲಿಕ್ ತರಬೇತಿ ನಡೆಸುವ ಸ್ಟೇಡಿಯಂನಲ್ಲಿ 80 ಲಕ್ಷ ರೂ ಮೊತ್ತದ ಏರ್‌ಕಂಡೀಶನ್ ಅಳವಡಿಸಲು ಸರಕಾರ ಒಪ್ಪಿಗೆ ನೀಡಿದೆ ಎಂದು ವಿಜ್ ಸ್ಪಷ್ಟಪಡಿಸಿದರು.
ರಿಯೋ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ನನಗೆ ಹರ್ಯಾಣ ಸರಕಾರ ಈ ತನಕ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. ನಾನು ಒಲಿಂಪಿಕ್ಸ್ ಪದಕ ಗೆದ್ದ ತಕ್ಷಣವೇ ಸಕಾರ ಬಹುಮಾನವನ್ನು ಪ್ರಕಟಿಸಿತ್ತು. ಇದು ಮಾಧ್ಯಮ ಪ್ರಚಾರಕ್ಕೆ ಸೀಮಿತವಾಗಿದೆಯೇ? ಎಂದು ಸಾಕ್ಷಿ ಮಲಿಕ್ ರವಿವಾರ ಟ್ವೀಟ್ ಮಾಡಿದ್ದರು.







