ಇಂಗ್ಲೆಂಡ್‌ನಲ್ಲಿ ಬುರ್ಕಿನಿ ಧರಿಸಲು ಮುಸ್ಲಿಂ ಈಜುಗಾರ್ತಿಯರಿಗೆ ಅವಕಾಶ

ಲಂಡನ್,ಮಾ.5: ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಹವ್ಯಾಸಿ ಈಜು ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳಾ ಈಜುಗಾರ್ತಿಯರಿಗೆ ಈಜುತೊಡುಗೆಯಾದ ಬುರ್ಕಿನಿ ಧರಿಸಿ ಈಜಲು ಅವಕಾಶ ಕಲ್ಪಿಸಲಾಗಿದೆ.
ಮುಸ್ಲಿಂ ಮಹಿಳಾ ಸ್ಪೋರ್ಟ್ಸ್ ಫೌಂಡೇಶನ್‌ನ ವಿನಂತಿಯ ಮೇರೆಗೆ ಅಮೆಚೂರ್ ಸ್ವಿಮ್ಮಿಂಗ್ ಅಸೋಸಿಯೇಶನ್(ಎಎಸ್‌ಎ) ಈಜುಡುಗೆಯಲ್ಲಿನ ನಿಯಮಾವಳಿಯಲ್ಲಿ ಸಡಿಲಿಕೆ ಮಾಡಲು ಸಮ್ಮಿತಿಸಿದ್ದು, ಸಡಿಲವಾದ ಸಂಪೂರ್ಣ ದೇಹವನ್ನು ಮುಚ್ಚುವ ಉಡುಪು ಧರಿಸಲು ಅವಕಾಶ ನೀಡಿದೆ.
ಈ ತನಕ ಒಲಿಂಪಿಯನ್‌ಗಳು ಧರಿಸುವಂತಹ ಸಂಪೂರ್ಣ ದೇಹವನ್ನು ಮುಚ್ಚುವಂತಹ ಈಜುಡುಗೆಯನ್ನು ತೊಡುವುದಕ್ಕೆ ನಿಷೇಧವಿತ್ತು. ಈಜುಡುಗೆಯಲ್ಲಿ ನಿಯಮ ಸಡಿಲಿಕೆಯಿಂದಾಗಿ ಇಂಗ್ಲೆಂಡ್‌ನ ಎಲ್ಲ ಮಹಿಳಾ ಈಜುಗಾರ್ತಿಯರು ಭಾಗವಹಿಸಲು ಅವಕಾಶ ಲಭಿಸಿದೆ.
ಈಗ ಜಾರಿಗೆ ತಂದಿರುವ ಹೊಸ ಮಾರ್ಗದರ್ಶಿಯು ಇಂಗ್ಲೆಂಡ್‌ನಲ್ಲಿರುವ ಹವ್ಯಾಸಿ ಸ್ಪರ್ಧಾಳುಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ಪರ್ಧಾಳುಗಳು ಧರಿಸಿರುವ ಈಜುಡುಗೆಯ ಬಗ್ಗೆ ರೆಫರಿಗಳು ಆಕ್ಷೇಪ ಎತ್ತಿದ್ದರೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಬುರ್ಖಾ ಧರಿಸಿ ಸ್ಪರ್ಧಿಸಲು ಬಯಸುವ ಸ್ಪರ್ಧಾಳುಗಳು ಸ್ವಿಮ್ಮಿಂಗ್‌ಗೆ ಮೊದಲು ತಮ್ಮ ಈಜುಡುಗೆಯನ್ನು ತಪಾಸಣೆಗಾಗಿ ರೆಫರಿಗೆ ನೀಡಬೇಕಾಗುತ್ತದೆ. ರೆಫರಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಇಂಗ್ಲೆಂಡ್‌ನ ಸ್ಪರ್ಧಾತ್ಮಕ ಈಜಿಗೆ ಇದು ತುಂಬಾ ಧನಾತ್ಮಕ ಅಂಶವಾಗಿದೆ. ನಿಯಮಗಳಲ್ಲಿನ ಬದಲಾವಣೆಯಿಂದ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಲು ಅವಕಾಶ ಲಭಿಸಿದೆ ಎಂದು ಎಎಸ್‌ಎ ಚೇರ್ಮನ್ ಕ್ರಿಸ್ ಬಾಸ್ಟಕ್ ಹೇಳಿದ್ದಾರೆ. ಕ್ರೀಡೆಗಳಲ್ಲಿ ಮುಸ್ಲಿಂ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಭಾರೀ ಹೆಚ್ಚಳವಾಗಿದೆ. ಈಜುಡುಗೆಗೆೆ ಸಂಬಂಧಿಸಿ ಎಎಸ್‌ಎ ತನ್ನ ಮಾರ್ಗದರ್ಶಿಯಲ್ಲಿ ಮಾಡಿರುವ ಬದಲಾವಣೆ ನಮಗೆ ಸಂತಸ ಉಂಟು ಮಾಡಿದೆ. ನಮ್ಮ ಮನವಿಗೆ ಅವರು ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುವೆವು’’ ಎಂದು ಮುಸ್ಲಿಂ ಮಹಿಳಾ ಸ್ಪೋರ್ಟ್ಸ್ ಫೌಂಡೇಶನ್‌ನ ರಿಮ್ಲಾ ಅಖ್ತರ್ ಹೇಳಿದ್ದಾರೆ.







