ಮೆಕ್ಸಿಕೊ ಓಪನ್: ನಡಾಲ್‌ಗೆ ಶಾಕ್ ನೀಡಿದ ಕ್ವೆರಿಗೆ ಪ್ರಶಸ್ತಿ
.jpg)
ಅಕಾಪುಲ್ಕೊ, ಮಾ.5: ಸ್ಪೇನ್‌ನ ದ್ವಿತೀಯ ಶ್ರೇಯಾಂಕಿತ ರಫೆಲ್ ನಡಾಲ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಅಮೆರಿಕದ ಸ್ಯಾಮ್ ಕ್ವೆರಿ ಎಟಿಪಿ ಮೆಕ್ಸಿಕೊ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕರಹಿತ ಅಮೆರಿಕದ ಆಟಗಾರ ಕ್ವೆರಿ ಸ್ಪೇನ್‌ನ ನಡಾಲ್‌ರನ್ನು 6-3, 7-6(3) ಸೆಟ್‌ಗಳಿಂದ ಮಣಿಸಿದರು. ವಿಶ್ವ ರ್ಯಾಂಕಿಂಗ್‌ನಲ್ಲಿ 40ನೆ ಸ್ಥಾನದಲ್ಲಿರುವ ಕ್ವೆರಿ ಅವರು ನಡಾಲ್ ವಿರುದ್ಧ ಆಡಿರುವ 5 ಪಂದ್ಯಗಳ ಪೈಕಿ ಮೊದಲ ಜಯ ಸಾಧಿಸಿದರು.
2005 ಹಾಗೂ 2013ರಲ್ಲಿ ಮೆಕ್ಸಿಕೊ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ನಡಾಲ್ ಮೆಕ್ಸಿಕೊ ಓಪನ್‌ನಲ್ಲಿ ಈ ತನಕ ಒಂದೂ ಸೆಟ್‌ನ್ನು ಸೋತಿರಲಿಲ್ಲ. ಅಜೇಯ ಗೆಲುವಿನ ಓಟದಲ್ಲಿದ್ದ ನಡಾಲ್‌ರನ್ನು ಸೋಲಿಸಿದ ಕ್ವೆರಿ 9ನೆ ಬಾರಿ ಎಟಿಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಕ್ವೆರಿ ಪ್ರಸ್ತುತ ಟೂರ್ನಿಯಲ್ಲಿ ಅಗ್ರ-10ರಲ್ಲಿ ನಾಲ್ವರು ಆಟಗಾರರಾದ ಬೆಲ್ಜಿಯಂನ ಡೇವಿಡ್ ಗೊಫಿನ್, ಆಸ್ಟ್ರೀಯದ ಡೊಮಿನಿಕ್ ಥಿಯೆಮ್, ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ ಹಾಗೂ 6ನೆ ರ್ಯಾಂಕಿನ ನಡಾಲ್‌ರನ್ನು ಸೋಲಿಸಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ರೋಜರ್ ಫೆಡರರ್ ವಿರುದ್ಧ ಐದು ಸೆಟ್‌ಗಳ ಅಂತರದಿಂದ ಸೋತ ಬಳಿಕ ಮೊದಲ ಟೂರ್ನಮೆಂಟ್‌ನ್ನು ಆಡಿರುವ ನಡಾಲ್‌ಗೆ 2014ರ ಬಳಿಕ ಮೊದಲ ಬಾರಿ ಹಾರ್ಡ್‌ಕೋರ್ಟ್ ಪ್ರಶಸ್ತಿಯನ್ನು ಜಯಿಸುವ ಅವಕಾಶವನ್ನು ಕ್ವೆರಿ ನಿರಾಕರಿಸಿದರು.







