ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕಳವು: ದೂರು
ಕಾಪು, ಮಾ.5: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಚಿನ್ನದ ಸರ ಕಳವು ಮಾಡಿರುವ ಘಟನೆ ಮಾ.4ರಂದು ಸಂಜೆ ವೇಳೆ ಮೂಳೂರು ಎಂಬಲ್ಲಿ ನಡೆದಿದೆ.
ಪಣಿಯೂರು ನಿವಾಸಿ ವೈ.ವಾಸುದೇವ ಆಚಾರ್ಯ(58)ಎಂಬವರು ಮೂಳೂರು ಪಂಚಮಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀದುರ್ಗಾ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ 25ರಿಂದ 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ಬೆಳ್ಳಿ ಆಭರಣಗಳ ಬಗ್ಗೆ ವಿಚಾರಿಸಿದನೆನ್ನಲಾಗಿದೆ. ಈ ಸಂದರ್ಭ ಆತ ವಾಸುದೇವ ಆಚಾರ್ಯರ ಗಮನವನ್ನು ಬೇರೆಡೆ ಸೆಳೆದು ಅಂಗಡಿಯ ಟೇಬಲ್ ಮೇಲೆ ಇಟ್ಟಿದ್ದ ರಿಪೇರಿಗೆಂದು ಬಂದಿದ್ದ 18 ಗ್ರಾಂ. ತೂಕದ ಚಿನ್ನದ ಕರಿ ಮಣಿ ಸರ ಮತ್ತು 8 ಗ್ರಾಂ ತೂಕದ ಒಂದು ಚಿನ್ನದ ಉಂಗುರವನ್ನು ಅಪಹರಿಸದನೆನ್ನಲಾಗಿದೆ.
ತಕ್ಷಣ ವಿಷಯ ತಿಳಿದು ವಿಚಾರಿಸುವಷ್ಟರಲ್ಲಿ ಆತ ಅಂಗಡಿಯ ಹೊರಗಡೆ ನಿಂತುಕೊಂಡಿದ್ದ ಇನ್ನೋರ್ವ ವ್ಯಕ್ತಿಯ ಬೈಕ್ ಏರಿ ಪರಾರಿಯಾದನು ಎಂದು ತಿಳಿದು ಬಂದಿದೆ. ಕಳವಾದ ಚಿನ್ನದ ಒಟ್ಟು ಮೌಲ್ಯ ಸುಮಾರು 30,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.





