ನಗರಕ್ಕೆ ಮೂರು ತಿಂಗಳಿಗೆ ಬೇಕಾಗುವಷ್ಟು ಕುಡಿಯುವ ನೀರಿನ ಸಂಗ್ರಹವಿದೆ: ಹರಿನಾಥ್

ಮಂಗಳೂರು, ಮಾ.5: ಮಂಗಳೂರು ಮನಪಾಗೆ 3 ತಿಂಗಳಿಗೆ ಬೇಕಾಗುವಷ್ಟು ಕುಡಿಯುವ ನೀರಿನ ಸಂಗ್ರಹವಿದೆ. ಆದರೆ ತುಂಬೆ ನೀರು ಸಂಗ್ರಹದ ಕಿಂಡಿ ಅಣೆಕಟ್ಟಿನ ಬಳಿ ನೀರಿನ ಒಳಹರಿವು ಬಹುತೇಕ ಕ್ಷೀಣಿಸಿದೆ. ಮುಂಗಾರು ಮಳೆ ಸಕಾಲದಲ್ಲಿ ಬಂದರೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಕಡಿಮೆ ಎಂದು ಮನಪಾ ಮೇಯರ್ ಹರಿನಾಥ್ ಪತ್ರಿಕೆಗೆ ತಿಳಿಸಿದ್ದಾರೆ.
ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುತ್ತಿರುವ ತುಂಬೆಯ ಕಿಂಡಿ ಅಣೆಕಟ್ಟಿನಲ್ಲಿ 5 ಮೀಟರಿಗಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಪಕ್ಕದಲ್ಲಿರುವ ಎಎಂಆರ್ ಡ್ಯಾಂನಲ್ಲಿಯೂ ನೀರಿನ ಸಂಗ್ರವಿದೆ ಅದನ್ನು ಬಳಸಿಕೊಂಡಿಲ್ಲ. ಎಲ್ಲ ಕಡೆಯ ನೀರಿನ ಸಂಗ್ರಹವನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಬಾರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದು. ಆದರೆ ನೇತ್ರಾವತಿ ಕುಮಾರಧಾರಾ ನದಿಯ ಜಲಾನಯನ ಪ್ರದೇಶ ದಲ್ಲಿ ಸಕಾಲದಲ್ಲಿ ಮಳೆಯಾಗದೆ ಹೋದರೆ ಮೂರು ತಿಂಗಳ ಬಳಿಕ ನೀರಿನ ಸಮಸ್ಯೆ ಉಂಟಾಗಬಹುದು ಎಂದಿದ್ದಾರೆ.
ಅಂತರ್ಜಲ ವೃದ್ಧಿಗೆ ಯೋಜನೆ: ನಗರದಲ್ಲಿ ಬಿಸಿಲಿನ ಜಲಹೆಚ್ಚುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಯೋಜನೆಗಳನ್ನು ಹಮ್ಮಿಕೊಳ್ಳಲು ಮಹಾನಗರ ಪಾಲಿಕೆ ಈ ಬಾರಿ ಸರಕಾರದ ನೆರವಿನೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೈಕಂಪಾಡಿ ಕುಳಾಯಿ ಬಳಿಯ ಬಗ್ಗುಂಡಿ ಕರೆ, ಜಪ್ಪು ಬಳಿ ಇರುವ ಗುಜ್ಜರ ಕರೆ, ಕಾವೂರು ಕರೆ, ಪಡೀಲ್ ಬಳಿಯ ಬೈರಾಡಿ ಕೆರೆ, ಎಮ್ಮೆಕರೆ ಸೇರಿದಂತೆ ಕೆರೆಗಳ ಅಭಿವೃದ್ಧಿ ಯೋಜನೆಯನ್ನು ಕೈ ಗೊಂಡಿದೆ. ಒಂದು ವರ್ಷದೊಳಗೆ ಬಹುತೇಕ ಈ ಕರೆ ಅಭಿವೃದ್ಧಿ ಯೋಜನೆ ಪೂರ್ಣಗೊಳ್ಳಲಿದೆ ಎಂದವರು ಹೇಳಿದ್ದಾರೆ.
ಮಂಗಳೂರು ಮನಪಾಗೆ ಹಲವು ವರ್ಷಗಳ ಹಿಂದೆ ಪ್ರಮುಖ ಜಲ ಮೂಲಗಳಾಗಿದ್ದ ಈ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲದ ಮಟ್ಟವವನ್ನು ವೃದ್ಧಿಸುವ ಯೋಜನೆಯನ್ನು ಆರಂಭಿಸಲಾಗಿದೆ. ಇದರಿಂದ ನಗರದ ಹಲವು ಪ್ರದೇಶಗಳಲ್ಲಿ ಉಳಿದಿರುವ ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸಲು ಸಾಧ್ಯವಾಗಬಹುದು ಎಂದು ತಿಳಿಸಿದ್ದಾರೆ.







