Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಾಡನ್ನು ಸುಟ್ಟ ಬೆಂಕಿ ನಾಡನ್ನು...

ಕಾಡನ್ನು ಸುಟ್ಟ ಬೆಂಕಿ ನಾಡನ್ನು ಬಿಟ್ಟೀತೇ?

ವಾರ್ತಾಭಾರತಿವಾರ್ತಾಭಾರತಿ6 March 2017 12:35 AM IST
share

ಕೆಲವು ಪ್ರಾಕೃತಿಕ ಸಮಸ್ಯೆಗಳು ಇತ್ಯರ್ಥವಾಗುವುದು ಸ್ವತಃ ರಾಜಕಾರಣಿಗಳಿಗೇ ಬೇಕಾಗಿರುವುದಿಲ್ಲ. ಅವು ಪ್ರತೀ ವರ್ಷ ಸುದ್ದಿ ಮಾಡುತ್ತಲೇ ಇರಬೇಕು ಮತ್ತು ಅವುಗಳಿಗಾಗಿ ಹಣ ಸುರಿಯುತ್ತಲೇ ಇರಬೇಕು. ಯಾವ ಸರಕಾರ ಬಂದರೂ ಇವು ಮುಂದುವರಿಯುತ್ತವೆ. ಸರಕಾರ ಪರಿಹಾರದ ಭರವಸೆಗಳನ್ನು ಘೋಷಿಸುತ್ತಲೇ ಇರುತ್ತದೆಯಾದರೂ, ಪ್ರತೀ ವರ್ಷ ಈ ಸಮಸ್ಯೆಗಳು ನಾಡನ್ನು ಕಾಡುತ್ತಲೇ ಇರುತ್ತವೆ. ಬರ ಮತ್ತು ನೆರೆ ಸಮಸ್ಯೆಗಳನ್ನೇ ತೆಗೆದುಕೊಳ್ಳೋಣ. ಕಳೆದ ನಾಲ್ಕೈದು ದಶಕಗಳಿಂದ ಬರ-ನೆರೆಗಳ ಕುರಿತಂತೆ ಎಲ್ಲ ಸರಕಾರಗಳೂ ಮಾತನಾಡುತ್ತಲೇ ಬಂದಿವೆೆ. ಬೀದಿಗಿಳಿದು ಪರಿಹಾರ ನಿಧಿ ಸಂಗ್ರಹಿಸುವ ನಾಟಕವಾಡುತ್ತವೆ. ಜೊತೆಗೆ ಕೇಂದ್ರ ಸರಕಾರಕ್ಕೆ ಪರಿಹಾರಕ್ಕಾಗಿ ಅರ್ಜಿ ಹಾಕುತ್ತವೆ. ಕೇಂದ್ರಕ್ಕೂ ಈ ಅರ್ಜಿಯನ್ನು ಸ್ವೀಕರಿಸಿ ಅಭ್ಯಾಸವಾಗಿ ಬಿಟ್ಟಿದೆ. ತಕ್ಷಣ ಅದು ಅಧಿಕಾರಿಗಳನ್ನು ಸಮೀಕ್ಷೆ ನಡೆಸಲು ಕಳುಹಿಸಿ ಕೊಡುವ ನಾಟಕವಾಡುತ್ತದೆ.

ಇವರು ಸಾವಿರ ಕೇಳಿದರೆ ಅವರು ನೂರು ಬಿಡುಗಡೆ ಮಾಡುತ್ತಾರೆ. ಅಲ್ಲಿಂದ ಅದು ರಾಜ್ಯದಲ್ಲಿ ರಾಜಕಾರಣಿಗಳು, ಅಧಿಕಾರಿಗಳ ನಡುವೆ ಬಟವಾಡೆಯಾಗುತ್ತದೆ. ಅವರಿಂದ ಅದು ಜನರಿಗೆ ತಲುಪುವಾಗ ಪೈಸೆಯ ಲೆಕ್ಕದಲ್ಲಿರುತ್ತದೆ. ಯಾವ ಪರಿಹಾರ ನಿಧಿಗಳೂ ಬರ, ನೆರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಈವರೆಗೆ ನೀಡಿಲ್ಲ. ಬರೇ ತೇಪೆ ಕೆಲಸಗಳನ್ನಷ್ಟೇ ಮಾಡಿವೆ. ಯಾವ ಯಾವ ಪ್ರದೇಶಗಳು ಬರಪೀಡಿತ ಅಥವಾ ನೆರೆ ಪೀಡಿತ ಎನ್ನುವುದರ ಸ್ಪಷ್ಟ ಚಿತ್ರಣ ನಮ್ಮಲ್ಲಿದ್ದರೂ ಅದಕ್ಕೊಂದು ಶಾಶ್ವತ ಪರಿಹಾರವನ್ನು ನೀಡಬಲ್ಲ, ಬೃಹತ್ ಯೋಜನೆಯನ್ನು ಹಾಕಿಕೊಳ್ಳುವ ಕೆಲಸವನ್ನು ಕಳೆದ ಮೂವತ್ತು ವರ್ಷಗಳಲ್ಲಿ ನಾವು ಮಾಡಿಲ್ಲ. ಈ ದೇಶದಲ್ಲಿರುವ ದೇವಸ್ಥಾನ, ಮಸೀದಿಗಳ ಪುನರುಜ್ಜೀವನಗೊಳಿಸುವುದರಲ್ಲಿ ನಮಗಿರುವ ಆಸಕ್ತಿ ಹೂಳು ತುಂಬಿದ ಕೆರೆಗಳನ್ನು ಪುನರುಜ್ಜೀವಗೊಳಿಸುವುದರಲ್ಲಿ ಇದ್ದಿದ್ದರೆ, ಇಂದು ನಮ್ಮ ನಾಡಿನ ಬಹುತೇಕ ಭಾಗಗಳು ಹಸಿರಾಗಿ ನಳನಳಿಸುತ್ತಿದ್ದವೇನೋ. ನೆರೆ, ಬರ ಪಕ್ಕಕ್ಕಿರಲಿ.

ಕರಾವಳಿಯಲ್ಲಿ ಮಳೆಗಾಲ ಆರಂಭವಾದಾಗ ಎಲ್ಲ ಮಾಧ್ಯಮಗಳು ಕಡಲ್ಕೊರೆತದ ಕುರಿತಂತೆ ಕೊರೆತ ಶುರು ಮಾಡುತ್ತವೆ. ಇದು ಇಂದು ನಿನ್ನೆಯ ಕೊರೆತ ಅಲ್ಲ. ಈ ಕಡಲ್ಕೊರೆತದ ಹೆಸರಿನಲ್ಲಿ ಆಗಿ ಹೋದ ನೂರಾರು ಸಚಿವರು ಜರ್ಮನಿ, ಜಪಾನ್ ಎಂದು ವಿದೇಶ ಯಾತ್ರೆ ಮಾಡಿದ್ದಾರೆ. ಅಲ್ಲಿನ ಆಧುನಿಕ ತಂತ್ರಜ್ಞಾನಗಳನ್ನು ತಂದು ಕಡಲ್ಕೊರೆತವನ್ನು ಶಾಶ್ವತವಾಗಿ ಪರಿಹರಿಸುತ್ತೇವೆ ಎಂದು ಹಲವು ಮಾಜಿ ಸಚಿವರು ಪತ್ರಿಕಾಗೋಷ್ಠಿಗಳನ್ನು ಮಾಡಿ ದಶಕಗಳು ಕಳೆದಿವೆ. ಕಡಲ್ಕೊರೆತ ಮಾತ್ರ ಮುಂದುವರಿಯುತ್ತಲೇ ಇದೆ. ಈ ಕಡಲು ನುಂಗಿದ ಬೃಹತ್ ಕಲ್ಲುಗಳಿಗೆ ಲೆಕ್ಕವೇ ಇಲ್ಲ. ಕರಾವಳಿಯ ಅರಬಿ ಸಮುದ್ರಕ್ಕೇನಾದರೂ ಬಾಯಿಯಿದ್ದರೆ, ತನ್ನ ಒಡಲಲ್ಲಿರುವ ಕಲ್ಲುಗಳು ಮತ್ತು ಕಡತದಲ್ಲಿರುವ ಕಲ್ಲುಗಳ ಲೆಕ್ಕದ ತಾಳೆ ನೋಡಿ ಬೆಚ್ಚಿ ಬೇಳಬಹುದು. ಯಾಕೆಂದರೆ ನಮ್ಮ ಅಧಿಕಾರಿಗಳು ಕಡತದಲ್ಲಿ ದಾಖಲಿಸಿರುವ ಅಷ್ಟೂ ಕಲ್ಲುಗಳನ್ನು ಕಡಲಿಗೇನಾದರೂ ಸುರಿದಿದ್ದರೆ ಕಡಲ್ಕೊರೆತವೇನು, ಕಡಲೇ ಕಾಣೆಯಾಗಿ ಬಿಡುತ್ತಿತ್ತು. ಹಾಗಾದರೆ ಕಡಲಲ್ಲಿರುವ ಅಷ್ಟೂ ಕಲ್ಲುಗಳನ್ನು ನಿಜಕ್ಕೂ ನುಂಗಿದವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕ ದಿನ, ಕಡಲ್ಕೊರೆತ ಸಮಸ್ಯೆಗೂ ಒಂದು ಪರಿಹಾರ ಸಿಕ್ಕೀತು.

ಇದೀಗ ರಾಜ್ಯದಲ್ಲಿ ಕಾಡು ಎರಡು ಕಾರಣಗಳಿಗಾಗಿ ಸುದ್ದಿಯಾಗುತ್ತಿದೆೆ. ಒಂದೆಡೆ ಅಧಿಕಾರಿಗಳ ದರ್ಪದ ಬೆಂಕಿಗೆ ಸಿಕ್ಕಿರುವ ಅರಣ್ಯವಾಸಿಗಳಿಗಾಗಿ. ಮಗದೊಂದೆಡೆ ಅರಣ್ಯವನ್ನು ಸುಡುತ್ತಿರುವ ನಿಗೂಢ ಬೆಂಕಿಯ ಕಾರಣದಿಂದ. ಬಂಡೀಪುರ ನಾಗರಹೊಳೆ ಅಭಯಾರಣ್ಯದಲ್ಲಿ ಈ ವರ್ಷ ಬಿದ್ದಿರುವ ಬೆಂಕಿ ಇತಿಹಾಸದಲ್ಲೇ ಮೂರನೆ ಅತೀ ದೊಡ್ಡ ಹಾನಿ ಉಂಟು ಮಾಡಿದೆ ಎನ್ನುವುದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. 2012ರಲ್ಲಿ ಈ ಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಸುಮಾರು 2,900 ಎಕರೆ ಕಾಡನ್ನು ಆಹುತಿ ತೆಗೆದುಕೊಂಡಿತ್ತು. ಎರಡು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಕಾಣಿಸಿಕೊಂಡ ಬೆಂಕಿ ಎರಡೂವರೆ ಸಾವಿರ ಹೆಕ್ಟೇರ್ ಕಾಡನ್ನು ಸುಟ್ಟು ಹಾಕಿತ್ತು. ಇದೀಗ ಕಾಣಿಸಿಕೊಂಡಿರುವ ಬೆಂಕಿ ಈವರೆಗೆ 1,200ಕ್ಕೂ ಅಧಿಕ ಹೆಕ್ಟೇರ್ ಕಾಡನ್ನು ಆಹುತಿ ತೆಗೆದುಕೊಂಡಿದೆ. ಐದು ವರ್ಷಗಳ ಹಿಂದೆ ಕಾಡಿಗೆ ಬೆಂಕಿ ಬಿದ್ದಾಗ ಅದನ್ನು ನಂದಿಸಲು ಅರಣ್ಯಾಧಿಕಾರಿಗಳು ಪಟ್ಟ ಶ್ರಮ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿತ್ತು.

ಒಂದು ರೀತಿಯಲ್ಲಿ ಈ ಬೆಂಕಿಯ ಮುಂದೆ ಅರಣ್ಯಾಧಿಕಾರಿಗಳು ಅಸಹಾಯಕರಾಗಿದ್ದರು. ಬೆರಳೆಣಿಕೆಯ ಸಿಬ್ಬಂದಿ ಈ ಬೆಂಕಿಯನ್ನು ದೂರದಲ್ಲಿ ನಿಂತು ಅಸಹಾಯಕರಾಗಿ ನೋಡುವುದಲ್ಲದೆ ಇನ್ನೇನು ಮಾಡಲು ಸಾಧ್ಯವಿತ್ತು? ಬಹುಸಂಖ್ಯೆಯ ಸಿಬ್ಬಂದಿಯಲ್ಲ, ಕಾಡಿನೊಳಗೆ ಹೋಗಿ ಬೆಂಕಿಯನ್ನು ನಂದಿಸಲು ಅತ್ಯಾಧುನಿಕ ವ್ಯವಸ್ಥೆಗಳಿಲ್ಲ, ಬೆಂಕಿ ಆವರಿಸಿರುವ ಪ್ರದೇಶಗಳನ್ನು ಗುರುತಿಸಲು ಅತ್ಯಾಧುನಿಕ ಹೆಲಿಕಾಪ್ಟರ್‌ಗಳ ವ್ಯವಸ್ಥೆಗಳಿಲ್ಲ. ಅಧಿಕಾರಿಗಳು ಬೇರೆ ಬೇರೆ ಕಡೆಗಳಿಂದ ಸಹಾಯವನ್ನು ಪಡೆದು ಬೆಂಕಿಯನ್ನು ನಂದಿಸಬೇಕು ಎನ್ನುವಷ್ಟರಲ್ಲಿ ಬಹಳಷ್ಟು ಅನಾಹುತಗಳು ನಡೆದು ಹೋಗಿರುತ್ತವೆ. ಈ ಬಾರಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಕಾಡಿಗೆ ಬೀಳುವ ಬೆಂಕಿ ಸದಾ ವಿವಾದಗಳನ್ನು ಸೃಷ್ಟಿಸುತ್ತಲೇ ಇರುತ್ತದೆ. ಮಹಾಭಾರತದಲ್ಲಿ ನಗರ ನಿರ್ಮಾಣಕ್ಕಾಗಿ ಪಾಂಡವರು ನಡೆಸುವ ‘ಖಾಂಡವ ದಹನ’ ಅಂತಿಮವಾಗಿ ಹಲವು ದುರಂತಗಳಿಗೆ ಕಾರಣವಾಗುವುದನ್ನು ನಾವು ಓದಿದ್ದೇವೆ. ನೂರಾರು ಬುಡಕಟ್ಟು ಸಮುದಾಯಗಳನ್ನೇ ಈ ಬೆಂಕಿ ನಾಶ ಮಾಡುತ್ತದೆ. ಪ್ರತಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿ ಈ ಬುಡಕಟ್ಟು ಸಮುದಾಯ ಪಾಂಡವರ ವಿರುದ್ಧ ಸೇಡಿಗೆ ನಿಲ್ಲುತ್ತದೆ. ಕಾಡಿಗೆ ಬೀಳುವ ಬೆಂಕಿಗೆ ಹಲವು ಮುಖಗಳಿವೆ. ಕುದುರೆಮುಖ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪಶ್ಚಿಮಘಟ್ಟದಲ್ಲಿ ಬದುಕುತ್ತಿರುವ ಆದಿವಾಸಿಗಳನ್ನು ಒದ್ದೋಡಿಸಲು ಅರಣ್ಯಾಧಿಕಾರಿಗಳು ಕಾಡ್ಗಿಚ್ಚನ್ನೂ ಒಂದು ತಂತ್ರವಾಗಿ ಬಳಸಿಕೊಂಡಿರುವ ಕುರಿತಂತೆ ಕೇಳಿದ್ದೇವೆ.

ಈ ಭಾಗದಲ್ಲಿ ನಕ್ಸಲ್ ಹಿಂಸೆಗೂ ಅದು ಕಾರಣವಾಯಿತು. ಸದ್ಯದ ದಿನಗಳಲ್ಲಿ ಪುರಾಣ ಕತೆಯ ಪಾಂಡವರು ಇಂದು ಸೂಟುಬೂಟುಗಳನ್ನು ಹಾಕಿಕೊಂಡು ಅಭಿವೃದ್ಧಿಯ ಮಾತನ್ನಾಡುತ್ತಿದ್ದಾರೆ. ಆದಿವಾಸಿಗಳು ಕಾಡಿನ ಶತ್ರುಗಳು ಎಂದು ಬಿಂಬಿಸಿ ಅವರನ್ನು ಹೊರ ಹಾಕಲು ಸಂಚು ಹೂಡಿದ್ದಾರೆ. ಆದರೆ ಆದಿವಾಸಿಗಳು ನಿಜಕ್ಕೂ ಕಾಡಿನ ಶತ್ರುಗಳೇ ಆಗಿದ್ದರೆ ಇಂದು ಪಶ್ಚಿಮಘಟ್ಟ, ನಾಗರಹೊಳೆ ಅರಣ್ಯ ಪ್ರದೇಶವನ್ನು ನೋಡುವ ಅವಕಾಶವೇ ನಮಗೆ ಸಿಗುತ್ತಿರಲಿಲ್ಲ. ಇಂದು ಈ ಭಾಗ ಹಸಿರಿನಿಂದ ನಳನಳಿಸುತ್ತಿದ್ದರೆ, ಈ ಆದಿವಾಸಿಗಳೇ ಕಾರಣ ಹೊರತು, ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನು ಪ್ರವೇಶಿಸಿರುವ ಸೂಟು ಬೂಟಿನ ಜನರಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕಾಡೊಳಗೆ ಅಭಿವೃದ್ಧಿಯ ವೇಷಧಾರಿಗಳು ಪ್ರವೇಶ ಮಾಡಿದ ದಿನಗಳಿಂದ ಕಾಡ್ಗಿಚ್ಚು ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದೆ.

ಅರಣ್ಯಾಧಿಕಾರಿಗಳ ಕಾವಲು ಬಲಗಳಿಗೂ ಈ ಕಾಡ್ಗಿಚ್ಚನ್ನು ತಣ್ಣಗಾಗಿಸಲು ಯಾಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಕಾಡ್ಗಿಚ್ಚು ಆಕಸ್ಮಿಕವಾಗಿ ಸಂಭವಿಸುತ್ತಿಲ್ಲ, ಅದರ ಹಿಂದೆ ಕಾಣದ ಕೈಗಳಿವೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡುತ್ತಿರುವುದು ಇಂದು ನಿನ್ನೆಯಲ್ಲ. ಕಾಡುಗಳ್ಳರು, ಕಾಡಿನಲ್ಲಿ ವಿವಿಧ ಯೋಜನೆಗಳಿಗೆ ನೀಲ ನಕ್ಷೆ ರೂಪಿಸಿಕೊಂಡವರು ಒಂದಲ್ಲ ಒಂದು ರೀತಿ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಅವರ ಆರೋಪ. ಕೆಲವು ಅರಣ್ಯ ಸಿಬ್ಬಂದಿಯೂ ಇದನ್ನು ಕಂಡೂ ಕಾಣದಂತೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವ ಸಂಶಯಗಳೂ ಇವೆ. ಆದುದರಿಂದ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕಾಡುತ್ತಿರುವ ಕಾಡ್ಗಿಚ್ಚಿನ ಹಿಂದಿರುವ ಸತ್ಯಾಸತ್ಯತೆಗಳನ್ನು ಅರಿಯಲು ಗಂಭೀರ ತನಿಖೆಯೊಂದರ ಅಗತ್ಯವಿದೆ.

ಕಾಡಿಗೆ ಬೆಂಕಿ ಬಿದ್ದರೆ ನಾಶವಾಗುವುದು ಬರೇ ಮರಗಳು ಮಾತ್ರವಲ್ಲ, ವಿಶಾಲ ಜೀವ ವೈವಿಧ್ಯವೇ ಆ ಬೆಂಕಿಗೆ ಸಿಲುಕಿ ನಾಶವಾಗುತ್ತವೆ. ಅಮೂಲ್ಯ ಮರಗಳು, ಔಷಧೀಯ ಗಿಡಗಳು, ಮರಗಳನ್ನು ಆಶ್ರಯಿಸಿಕೊಂಡ ಪ್ರಾಣಿ ಪಕ್ಷಿಗಳು, ಕ್ರಿಮಿ ಕೀಟಗಳೆಲ್ಲವೂ ಮನುಷ್ಯನ ಸ್ವಾರ್ಥದ ಕಾರಣದಿಂದ ಈ ಭೂಮಿಯಿಂದ ಇಲ್ಲವಾಗುತ್ತವೆ. ಈ ಜೀವಶೃಂಖಲೆಯ ಜೊತೆಗೆ ಮನುಷ್ಯನೂ ಜೋಡಿಸಲ್ಪಟ್ಟಿದ್ದಾನೆ ಎನ್ನುವುದನ್ನು ನಾವು ಮರೆಯಬಾರದು. ಕಾಡನ್ನು ಸುಟ್ಟ ಬೆಂಕಿ ಒಂದಲ್ಲ ಒಂದು ದಿನ ಈ ನಾಡನ್ನೂ ಸುಡಲಿದೆ. ಅದಕ್ಕೆ ಮೊದಲು ನಾವು ಎಚ್ಚರಗೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X