ನಿಂತು ನೋಡಿದರೆ ಲಾಹೋರ್‌ನಿಂದಲೂ ಕಾಣುತ್ತಿದೆ ಭಾರತದ ಈ ಅತ್ಯಂತ ಎತ್ತರದ ತ್ರಿವರ್ಣ ಧ್ವಜ
ಅಚ್ಚರಿಯ ವಿವರಗಳು

ಹೊಸದಿಲ್ಲಿ, ಮಾ.6: ದೇಶದ ಅತಿ ಎತ್ತರದ ಧ್ವಜ ಇದು. 360 ಅಡಿ ಅಂದರೆ 110 ಮೀಟರ್ ಎತ್ತರದ ಈ ನೂತನ ಧ್ವಜವನ್ನು ಭಾರತ- ಪಾಕಿಸ್ತಾನ ಗಡಿಯ, ಪಾಕಿಸ್ತಾನದ ಕೂಗಳತೆ ದೂರದ ಅತ್ತಾರಿ ಪ್ರದೇಶದಲ್ಲಿ ರವಿವಾರ ಉದ್ಘಾಟಿಸಲಾಗಿದೆ.
ದೇಶದ ಅತಿ ಎತ್ತರದ ಹಾಗೂ ಅತಿದೊಡ್ಡ ತ್ರಿವರ್ಣ ಧ್ವಜವನ್ನು ಪಂಜಾಬ್ ಸಚಿವ ಅನಿಲ್ ಜೋಶಿ ಉದ್ಘಾಟಿಸಿದರು. 110 ಮೀಟರ್ ಎತ್ತರ ಹಾಗೂ 24 ಮೀಟರ್ ಅಗಲ ಇರುವ ಈ ತ್ರಿವರ್ಣಧ್ವಜ, 55 ಟನ್ ತೂಕವಿದೆ. 350 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಇದು ಅಮೃತಸರ ಅಭಿವೃದ್ಧಿ ಟ್ರಸ್ಟ್ ಪ್ರಾಧಿಕಾರದ ಯೋಜನೆ. "ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ, ಇದರ ಉದ್ಘಾಟನೆಯಾಗಿ ಸಚಿವರು ಚುನಾವಣಾ ಆಯೋಗದಿಂದ ವಿಶೇಷ ಅನುಮತಿ ಪಡೆದಿದ್ದಾರೆ" ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರತಿದಿನ ಸೂರ್ಯಾಸ್ತದ ವೇಳೆ ಗಡಿಭಾಗದಲ್ಲಿ ಧ್ವಜವಂದನೆ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸುವ ಸಾವಿರಾರು ಪ್ರವಾಸಿಗಳಿಗೆ ಇದು ಪ್ರಮುಖ ಆಕರ್ಷಣೆಯಾಗಲಿದೆ. ಪಾಕಿಸ್ತಾನಿ ಗ್ಯಾಲರಿಯಿಂದ ಕೂಡಾ ಕುತೂಹಲದಿಂದ ಭಾರತೀಯ ಧ್ವಜವನ್ನು ನೋಡುತ್ತಾರೆ. ಪಾಕಿಸ್ತಾನದ ಲಾಹೋರ್‌ನಿಂದ ಕೂಡಾ ಈ ಸ್ತಂಭ ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಅತಿ ಎತ್ತರದ ರಾಷ್ಟ್ರಧ್ವಜ ರಾಂಚಿಯಲ್ಲಿದ್ದು, ಇದರ ಎತ್ತರ 300 ಅಡಿ. ಅಮೃತಸರ ನಗರದಲ್ಲಿ ಈಗಾಗಲೇ 170 ಅಡಿ ಎತ್ತರದ ಧ್ವಜ, ಸ್ಥಳೀಯ ರಂಜೀತ್ ಅವೆನ್ಯೂ ಸಾರ್ವಜನಿಕ ಉದ್ಯಾನವನದಲ್ಲಿದೆ. ಇಲ್ಲಿ ಜನವರಿ 26ರಂದು ಧ್ವಜಾರೋಹಣಕ್ಕೆ ನಿರ್ಧರಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ. ಉಭಯ ದೇಶಗಳ ಗಡಿಯಿಂದ ಕೇವಲ 150 ಮೀಟರ್ ಅಂತರದಲ್ಲಿ ಇದನ್ನು ಪ್ರತಿಷ್ಠಾಪಿಸಲಾಗಿದೆ.







