ಗುಜರಾತ್ ನ ಎಲ್ಲ 182 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಆಮ್ ಆದ್ಮಿ ಪಕ್ಷ

ರಾಜಕೋಟ್, ಮಾ.6: ಆಮ್ ಆದ್ಮಿ ಪಕ್ಷ ತಾನು ಗುಜರಾತ್ ನ ಎಲ್ಲಾ 182 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೊಂಡಿದೆ. ಮುಂದಿನ ಐದು ದಿನಗಳಲ್ಲಿ ಪಕ್ಷ ಕಾರ್ಯಕರ್ತರ ಸಮ್ಮೇಳನಗಳನ್ನು ರಾಜ್ಯದಾದ್ಯಂತ ಏರ್ಪಡಿಸಿ ಕಾರ್ಯಕರ್ತರನ್ನು ಮುಂದಿನ ಚುನಾವಣೆಗೆ ಅದು ಸಜ್ಜುಗೊಳಿಸಲಿದೆ.
ರವಿವಾರದಂದು ಪಕ್ಷವು ತನ್ನ ಕಾರ್ಯಕರ್ತರಿಗಾಗಿ ರಾಜ್‌ಕೋಟ್ ನಗರದಲ್ಲಿ ದಿನಪೂರ್ತಿ ಕಾರ್ಯಾಗಾರವೊಂದನ್ನು ಹಮ್ಮಿಕೊಂಡಿತ್ತು. ದಿಲ್ಲಿಯ ಕಾರ್ಮಿಕ ಸಚಿವ ಹಾಗೂ ಪಕ್ಷದ ಗುಜರಾತ್ ಚುನಾವಣಾ ವ್ಯವಹಾರಗಳ ಉಸ್ತುವಾರಿಯೂ ಆಗಿರುವ ಗೋಪಾಲ್ ರೈ ಈ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ಎಎಪಿಯ ಎಲ್ಲಾ 182 ವಿಧಾನಸಭಾ ಕ್ಷೇತ್ರ ಘಟಕಗಳ ಅಧ್ಯಕ್ಷರು ಹಾಗೂ ಉಸ್ತುವಾರಿಗಳೂ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಸಲಾದ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
‘‘ರಾಜ್ಯವನ್ನು ಏಳು ವಲಯಗಳನ್ನಾಗಿ ವಿಂಗಡಿಸಿ ಮಾರ್ಚ್ 6ರಿಂದ ಮಾರ್ಚ್ 10ರ ತನಕ ಅಲ್ಲಿ ಕಾರ್ಯಕರ್ತರ ಸಮ್ಮೇಳನ ನಡೆಸಲಾಗುವುದು. ನಂತರ ಗುಜರಾತ್ ಆಜಾದಿ ಯಾತ್ರಾ ಹಮ್ಮಿಕೊಳ್ಳಲಾಗುವುದು. ಈ ಯಾತ್ರೆಯಂಗವಾಗಿ ಪಕ್ಷದ ನಾಯಕರು ಗುಜರಾತ್ ರಾಜ್ಯದ ಹಳ್ಳಿಗಳು ಹಾಗೂ ನಗರಗಳಿಗೆ ಹೋಗಿ ಎಎಪಿಯ ಸಿದ್ಧಾಂತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ,’’ ಎಂದು ಕಾರ್ಯಾಗಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲ್ ತಿಳಿಸಿದ್ದಾರೆ.
‘‘ಪ್ರಚಾರದ ಸಮಯದಲ್ಲಿ ದಿಲ್ಲಿ ಅಭಿವೃದ್ಧಿ ಮಾದರಿ ಹಾಗೂ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಹೋಲಿಸಿ ಅವುಗಳ ನಡುವಿರುವ ವ್ಯತ್ಯಾಸಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಅವರು ಹೇಳಿದರು. ‘‘ಒಂದು ಮಾದರಿ ಜನಸಾಮಾನ್ಯರಿಗಾಗಿದ್ದರೆ, ಇನ್ನೊಂದು ಮಾದರಿ ಕೆಲವೇ ಆಯ್ದ ಮಂದಿಯ ಅಭಿವೃದ್ಧಿಗಾಗಿ’’ ಎಂದು ಅವರು ಗುಜರಾತ್ ಮಾದರಿಯನ್ನು ಟೀಕಿಸಿದರು.
‘‘ಗುಜರಾತ್ ನಲ್ಲಿ ಪಟಿದಾರ್ ಗಳು ದನಿಯೆತ್ತಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ದಲಿತರು ದನಿಯೆತ್ತಿದರೂ ಇದೇ ಪರಿಣಾಮವೆದು ರಿಸಬೇಕಾಗುತ್ತದೆ. ದನಿಯೆತ್ತಿದ ರೈತರ ಮೇಲೆ ಲಾಠಿಚಾರ್ಜ್ ಮಾಡಲಾಗುತ್ತದೆ,’’ ಎಂದವರು ಆರೋಪಿಸಿದ್ದಾರೆ.







