ಆರೆಸ್ಸೆಸ್ ಕಾರ್ಯಕರ್ತರಲ್ಲಿ ಕಾಣದ ಉತ್ಸಾಹ, ಮುಖಂಡರಿಗೆ ಓಲೈಸುವ ತಲೆನೋವು
ಉತ್ತರ ಪ್ರದೇಶ ಚುನಾವಣಾ ಪ್ರಚಾರ

ಲಕ್ನೌ, ಮಾ.6: ಟಿಕೆಟ್ ಹಂಚಿಕೆ ವಿಚಾರದಲ್ಲಿ ಎದ್ದಿದ್ದ ಭಿನ್ನಮತದ ಹೊರತಾಗಿಯೂ ಆರೆಸ್ಸೆಸ್ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದಾರಾದರೂ ಅವರಲ್ಲಿ ಹಿಂದಿನಂತೆ ಉತ್ಸಾಹ ಕಾಣಿಸಿಕೊಂಡಿಲ್ಲ. ಗೋರಖಪುರ ಹಾಗೂ ವಾರಣಾಸಿಯಲ್ಲಿ ಹಲವು ಪ್ರಚಾರಕರು ತೋರಿಸುತ್ತಿರುವ ಅನಾಸಕ್ತಿ ಆರೆಸ್ಸೆಸ್ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಎರಡು ನಗರಗಳಲ್ಲಿ ಎರಡು ದಶಕಗಳ ಹಿಂದೆ ಕಾರ್ಯನಿರ್ವಹಿಸಿದ್ದ ಆರೆಸ್ಸೆಸ್ ಸಹ ಕಾರ್ಯವಾಹ ಕೃಷ್ಣ ಗೋಪಾಲ್ ಅವರು ಸ್ವತಃ ಕಾರ್ಯಕರ್ತರ ಬಳಿ ಹೋಗಿ ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುವಂತೆ ಅವರ ಮನವೊಲಿಸಬೇಕಾಗಿ ಬಂದಿತ್ತು.
ಅದೇ ಸಮಯ ಬಿಜೆಪಿಯ ಪೋಲಿಂಗ್ ಏಜೆಂಟರಾಗಿ ಬೂತುಗಳಲ್ಲಿ ಕಾರ್ಯನಿರ್ವಹಿಸದಂತೆ ಆರೆಸ್ಸೆಸ್ ಕಾರ್ಯಕರ್ತರಿಗೆ ಹೇಳಲಾಗಿದ್ದು ಅವರ ಬದಲು ಬೂತ್, ಸೆಕ್ಟರ್ ಹಾಗೂ ಅಸೆಂಬ್ಲಿ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಸಂಘಟಕರೇ ಜನರನ್ನು ಮತಗಟ್ಟೆಗಳಿಗೆ ಹೋಗಿ ಮತ ಚಲಾಯಿಸಲು ಪ್ರೇರೇಪಿಸುತ್ತಿದ್ದಾರೆ.
''ನಾವು ಮನೆ ಮನೆಗೆ ತೆರಳೀ ಜನರು ಮತ ಚಲಾಯಿಸಲು ಹೋಗುವಂತೆ ಉತ್ತೇಜಿಸುತ್ತಿದ್ದೇವೆ. ಹೆಚ್ಚಿನ ಕಡೆ ಬಿಜೆಪಿ ಬೆಂಬಲಿಗರು ಮತ ಚಲಾವಣೆಗೆ ಹಿಂದೇಟು ಹಾಕುತ್ತಿದ್ದಾರೆ'' ಎಂದು ವಾರಣಾಸಿಯ ಹಿರಿಯ ಪ್ರಚಾರಕರೊಬ್ಬರು ಹೇಳಿದ್ದಾರೆ.
ಹಲವು ನಾಯಕರ ಅಸಮಾಧಾನದಿಂದ ಕಂಗೆಟ್ಟಿರುವ ಪಕ್ಷವು ಲಕ್ನೌನಿಂದ ಮಾಜಿ ಆರೆಸ್ಸೆಸ್ ಪ್ರಚಾರಕರೊಬ್ಬರನ್ನು ಕರೆಸಿ ಅವರಿಂದ ಸಂಘಟನಾತ್ಮಕ ಕಾರ್ಯ ನಡೆಸುತ್ತಿದೆ. ಕೆಲವೆಡೆ ತಮ್ಮ ಅಸಮಾಧಾನದಿಂದ ಪಕ್ಷಕ್ಕೆ ನಷ್ಟವುಂಟಾಗಬಹುದೆಂದು ಅರಿತ ಕೆಲ ಬಿಜೆಪಿ ಕಾರ್ಯಕರ್ತರು ಮತ್ತೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ತರುವಾಯ ಗೋರಖಪುರದಲ್ಲಿನ ಆರೆಸ್ಸೆಸ್ ಪದಾಧಿಕಾರಿಯೊಬ್ಬರು ಇನ್ನೊಂದು ಕುತೂಹಲಕಾರಿ ಮಾಹಿತಿ ನೀಡುತ್ತಾರೆ. ''ಇತ್ತೀಚಿಗಿನ ದಿನಗಳಲ್ಲಿ ಎಲ್ಲವೂ ರಾಜಕೀಯಗೊಂಡಿದೆ. ಬಿಜೆಪಿಗಾಗಿ ಕೆಲಸ ಮಾಡಿ ಎಂದು ಸ್ವಯಂಸೇವಕರಿಗೆ ಹೇಳಿದರೆ, ಹಣಕ್ಕಾಗಿ ಕೆಲಸ ನಿರ್ವಹಿಸುವ ಬಿಜೆಪಿ ಕಾರ್ಯಕರ್ತರ ಬಗ್ಗೆ ಅವರು ಹೇಳುತ್ತಾರೆ. ಹೆಚ್ಚೆಚ್ಚು ಸ್ವಯಂಸೇವಕರು ತಮ್ಮ ಕಾರ್ಯಗಳಿಗಾಗಿ ಹಣವನ್ನು ಅಪೇಕ್ಷಿಸುತ್ತಿದ್ದಾರೆ,'' ಎಂದವರು ಹೇಳುತ್ತಾರೆ.