ಕಾಡುಹಂದಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಗುಂಡ್ಲುಪೇಟೆ.ಮಾ.6: ಕಾಡುಹಂದಿ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಬಲಚವಾಡಿ ಗ್ರಾಮದ ಬಸವಣ್ಣ ಎಂಬುವರ ಮಗ ನಾಗೇಂದ್ರಪ್ಪ (31) ಸಾವಿಗೀಡಾಗ ದುರ್ದೈವಿ.
ಮಾ 4ರ ರಾತ್ರಿ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದ ನಾಗೇಂದ್ರಪ್ಪ ತನ್ನ ಬೈಕಿನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗದಲ್ಲಿ ತೆರಕಣಾಂಬಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ರಸ್ತೆಗಡ್ಡಲಾಗಿ ಬಂದ ಕಾಡುಹಂದಿಗೆ ಢಿಕ್ಕಿಹೊಡೆದ ಪರಿಣಾಮವಾಗಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದರು. ಸಾಮಾಜಿಕ ವಲಯಾರಣ್ಯ ಕಚೇರಿಯ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಕಾಡುಹಂದಿಗಳ ನಿಯಂತ್ರಣಕ್ಕೆ ಆಗ್ರಹ:
ಈ ಭಾಗದಲ್ಲಿ ಕಾಡುಹಂದಿಗಳ ಹಾವಳಿ ಮಿತಿಮೀರಿದ್ದು ಸಾರ್ವಜನಿಕರ ಪಾಲಿಗೆ ಕಂಟಕವಾಗಿವೆ. ಕಳೆದ ವರ್ಷ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಬಲಚವಾಡಿ ಗ್ರಾಮದ ಈರಪ್ಪ ಎಂಬುವರ ಮೇಲೆ ದಾಳಿ ನಡೆಸಿ ಸಾಯಿಸಿತ್ತು.
ಸಮೀಪದ ಬೆರಟಹಳ್ಳಿ ಗ್ರಾಮದ ಮಹಿಳ್ಳೆಯೊಬ್ಬರ ಮೇಲೆ ದಾಳಿ ನಡೆಸಿತ್ತು. ಇಂಥಾ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರೂ ಕಾಡುಹಂದಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆಯು ಮುಂದಾಗಿಲ್ಲ. ಆದ್ದರಿಂದ ಇನ್ನದರೂ ಕ್ರಮಕೈಗೊಳ್ಳಬೇಕು ಎಂದು ಬಲಚವಾಡಿ ಗ್ರಾಮದ ನಟೇಶ್ ಹಾಗೂ ಬಿ.ಎಸ್.ಮಹೇಶ್ ಒತ್ತಾಯಿಸಿದ್ದಾರೆ.







