ತುಂಬೆ ಡ್ಯಾಮ್ ನೀರು 3 ತಿಂಗಳ ಬಳಕೆಗೆ ಸಾಧ್ಯ: ಮೇಯರ್
ನೀರಿನ ಒಳಹರಿವಿನಲ್ಲಿ ಇಳಿಕೆ: ಪೂರೈಕೆಯಲ್ಲಿ ಕಡಿತ ಸಾಧ್ಯತೆ !

ಮಂಗಳೂರು, ಮಾ.7 ತುಂಬೆ ಹೊಸ ವೆಂಟೆಡ್ ಡ್ಯಾಮ್‌ನಲ್ಲಿ 4.8 ಮೀ. ನೀರು ಲಭ್ಯವಿದ್ದು, ಪಾಯಿಂಟ್ 521 ಕ್ಯೂಸೆಕ್ಸ್‌ನಷ್ಟು ಒಳಹರಿವು ಇದೆ. ಎಎಂಆರ್ ಡ್ಯಾಮ್‌ನಲ್ಲೂ ನೀರು ಸಂಗ್ರಹವಿದ್ದು, ಸುಮಾರು ಮೂರು ತಿಂಗಳಿಗೆ ನಗರದಲ್ಲಿ ನೀರು ಪೂರೈಕೆಗೆ ಸಾಕಾಗಬಹುದು ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ಒಂದು ವರ್ಷದ ಮೇಯರ್ ಅವಧಿಯನ್ನು ಪೂರೈಸುತ್ತಿರುವ ಹರಿನಾಥ್‌ರವರು ಇಂದು ಸರ್ಕ್ಯೂಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವ ಸಂಧರ್ಭ ಈ ವಿಷಯ ತಿಳಿಸಿದರು.
ಮಂಗಳೂರು ಮಹಾನಗರಕ್ಕೆ ನಿರಂತರ ನೀರು ಪೂರೈಸುವ 75 ಕೋಟಿ ರೂ. ವೆಚ್ಚದ ಹೊಸ ತುಂಬೆ ಕಿಂಡಿ ಆಣೆಕಟ್ಟು ಸಿದ್ಧಗೊಂಡಿದ್ದು, ನವಂಬರ್‌ನಿಂದ ಐದು ಮೀ. ಎತ್ತರಕ್ಕೆ ನೀರು ಶೇಖರಿಸಲಾಗಿದೆ. ಈ ಬಾರಿ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ವತಿಯಿಂದ ಹಮ್ಮಿಕೊಳ್ಳಲಾದ ಇತರ ಹಲವಾರು ಯೋಜನೆಗಳ ಮಾಹಿತಿಯನ್ನು ಅವರು ಈ ಸಂದರ್ಭ ನೀಡಿದರು.
ನೀರಿನ ಒಳಹರಿವಿನಲ್ಲಿ ಇಳಿಕೆ: ಪೂರೈಕೆಯಲ್ಲಿ ಕಡಿತ ಸಾಧ್ಯತೆ !
ತುಂಬೆ ಅಣೆಕಟ್ಟಿನಲ್ಲಿ ನೇತ್ರಾವತಿ ನದಿ ನೀರಿನ ಒಳಹರಿವು ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವುದರಿಂದ ನಗರದಲ್ಲಿ ಮುಂದಿನ ದಿನಗಳಲ್ಲಿ ನೀರು ಪೂರೈಕೆಯಲ್ಲಿ ಕಡಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದರು.
ನಗರದಲ್ಲಿ ಕುಡಿಯುವ ನೀರು ಪೂರೈಕೆಯನ್ನು ಕಡಿತಗೊಳಿಸುವ ಕುರಿತಂತೆ ಒಂದು ವಾರದೊಳಗೆ ಮನಪಾ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲೋಟ್ ಪಿಂಟೊ, ಶಶಿಧರ ಹೆಗ್ಡೆ, ಭಾಸ್ಕರ ಮೊಯ್ಲಿ, ಅಶೋಕ್ ಡಿ.ಕೆ., ಅಪ್ಪಿ, ಕವಿತಾ ಸನಿಲ್, ಸಬಿತಾ ಮಿಸ್ಕಿತ್, ಶೈಲಜಾ, ಪುರುಷೋತ್ತಮ ಚಿತ್ರಾಪುರ, ಆಶಾ ಡಿಸಿಲ್ವ, ನಾಗವೇಣಿ, ಆಯುಕ್ತ ಮೊಹಮ್ಮದ್ ನಝೀರ್, ಕಾಂಗ್ರೆಸ್ ಮುಖಂಡ ವಿಶ್ವಾಸ್‌ಕುಮಾರ್‌ದಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







