ಚರಿತ್ರೆ ಮತ್ತು ಸಾಹಿತ್ಯ ಅಧ್ಯಯನ ಅರಿವು ಹೆಚ್ಚಿಸುತ್ತದೆ : ಪ್ರೊ.ಬಿ.ಸುರೇಂದ್ರರಾವ್
‘ಚರಿತ್ರೆ ಮತ್ತು ಸಾಹಿತ್ಯ' ವಿಚಾರ ಸಂಕಿರಣ

ಕೊಣಾಜೆ, ಮಾ.6: ಸಾಹಿತ್ಯ ಮತ್ತು ಚರಿತ್ರೆಯ ಆಶಯ, ಧೋರಣೆ ವಿಭಿನ್ನವಾಗಿದ್ದರೂ ಇವರೆಡನ್ನೂ ಸೇರಿಸಿ ಅಧ್ಯಯನ ಮಾಡಿದಾಗ ಸಾಕಷ್ಟು ವಿಚಾರಧಾರೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರರಾವ್ ಅವರು ಅಭಿಪ್ರಾಯ ಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ಎಸ್ವಿಪಿ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಸೋಮವಾರ ‘ಚರಿತ್ರೆ ಮತ್ತು ಸಾಹಿತ್ಯ ಎರಡು ದಿನಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇತಿಹಾಸವೆಂದರೆ ಕೇವಲ ಭೂತಕಾಲದ ವಿಚಾರಗಳು ಮಾತ್ರವೇ ಅಲ್ಲ, ವರ್ತಮಾನ ಮತ್ತು ಭೂತಕಾಲದ ನಡುವಿನ ಒಂದು ಪರಿಧಿಯನ್ನು ಇತಿಹಾಸವು ನಿರ್ಮಿಸಿಕೊಡುತ್ತದೆ. ಸಾಹಿತ್ಯದ ವಸ್ತು ವಿಷಯದಲ್ಲಿ ಕೆಲವೊಂದು ನಮ್ಮದೇ ಆದ ಕಲ್ಪನೆಗಳನ್ನೂ, ಸಾಹಿತ್ಯಿಕ ಅಂಶಗಳನ್ನು ಬರೆಯಬಹುದು. ಆದರೆ ಇತಿಹಾಸದ ವಿಷಯದಲ್ಲಿ ನಾವು ನೈಜತೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಆದರೂ ಕೂಡಾ ಇತ್ತೀಚೆಗೆ ಇತಿಹಾಸಕಾರರನ್ನು ನಂಬುವವರು ಕಡಿಮೆಯಾಗುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು ಚರಿತ್ರೆ ಮತ್ತು ಸಾಹಿತ್ಯ ವಿಷಯಗಳು ಬಹಳಷ್ಟು ವಿಚಾರಗಳನ್ನು ತಿಳಿಸುವಲ್ಲಿ ಸಹಕಾರಿಯಾಗುತ್ತದೆ. ಇಂತಹ ವಿಷಯಗಳು ನಮ್ಮ ಸಿಲೆಬಸ್‌ನಲ್ಲಿ ಕೂಡಾ ಬರಬೇಕಾಗಿದೆ. ಚರಿತ್ರೆ ಮತ್ತು ಇತಿಹಾಸ ಒಂದಕ್ಕೊಂದು ಪೂರವಾಗಿದ್ದು ಇದರಿಂದ ಹಲವಾರು ಮಹತ್ವಪೂರ್ಣವಾದ ವಿಚಾರಗಳನ್ನು ನಾವು ಅರಿತುಕೊಂಡು ಜ್ಞಾನದ ಶಿಸ್ತನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿಚಾರ ಸಂಕಿರಣದ ಸಂಯೋಜಕರಾದ ಪ್ರೊ.ಉದಯ ಬಾರ್ಕೂರು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







