ಅಂತಿಮ ಹಂತದ ಚುನಾವಣಾ ಪ್ರಚಾರಕ್ಕೆ ತೆರೆ

ಹೊಸದಿಲ್ಲಿ,ಮಾ.6: ತೀಕ್ಷ್ಣ ಟೀಕೆಗಳ ವಿನಿಮಯಕ್ಕೆ ಸಾಕ್ಷಿಯಾಗಿದ್ದ ತುರುಸಿನ ಚುನಾವಣಾ ಪ್ರಚಾರಕ್ಕೆ ಉತ್ತರ ಪ್ರದೇಶ ಮತ್ತು ಮಣಿಪುರಗಳಲ್ಲಿ ಸೋಮವಾರ ಸಂಜೆ ತೆರೆ ಬಿದ್ದಿತು.
ಚುನಾವಣಾ ಫಲಿತಾಂಶ ನರೇಂದ್ರ ಮೋದಿ ಸರಕಾರವನ್ನು ಎದುರಿಸಲು ತಮಗೆ ಹೆಚ್ಚಿನ ಬಲ ನೀಡಲಿದೆ ಎಂದು ಪ್ರತಿಪಕ್ಷಗಳು ನಿರೀಕ್ಷಿಸಿವೆ.
ಆದರೆ ಮತದಾರರನ್ನು ಸೆಳೆಯಲು ಮೋದಿ ಮತ್ತು ಬಿಜೆಪಿ ಯಾವುದೇ ಪ್ರಯತ್ನವನ್ನು ಉಳಿಸಿಲ್ಲ. ಬುಧವಾರ ಉತ್ತರ ಪ್ರದೇಶ ವಿಧಾನಸಭೆಗೆ ಏಳನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದ್ದು, ಪ್ರಚಾರಕ್ಕಾಗಿ ಮೋದಿ ತನ್ನ ಸ್ವಕ್ಷೇತ್ರವಾದ ವಾರಣಾಸಿ ಯಲ್ಲಿಯೇ ಬೀಡು ಬಿಟ್ಟು ಅಲ್ಲಿ ಮತ್ತು ಸಮೀಪದ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಮಣಿಪುರದಲ್ಲಿಯೂ ಎರಡನೇ ಮತ್ತು ಅಂತಿಮ ಹಂತದ ಮತದಾನ ಬುಧವಾರವೇ ನಡೆಯಲಿದೆ.
ವಾರಣಾಸಿ ಸೋಮವಾರ ಅಬ್ಬರದ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಿದ್ದು, ಮೋದಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯವತಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಹಿರಿಯ ನಾಯಕರು ತಮ್ಮ ಅಭ್ಯರ್ಥಿಗಳ ಪರ ಮತಗಳನ್ನು ಯಾಚಿಸಿದರು.
ಪಂಚರಾಜ್ಯಗಳ ಚುನಾವಣೆಗೆ ಮತದಾನ ಫೆ.4ರಿಂದ ಆರಂಭಗೊಂಡಿದ್ದು, ಅಂತಿಮ ಮತದಾನವು ಅಭ್ಯರ್ಥಿಗಳ ನಿಧನದಿಂದಾಗಿ ಚುನಾವಣೆ ಮುಂದೂಡಲ್ಪಟ್ಟಿದ್ದ ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮಾ.9ರಂದು ನಡೆಯಲಿದೆ. ಎಲ್ಲ ರಾಜ್ಯಗಳಲ್ಲಿ ಮತಎಣಿಕೆ ಮಾ.11ರಂದು ನಡೆಯಲಿದೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಮುಖ್ಯವಾಗಿ ಎಲ್ಲರ ಕಣ್ಣುಗಳು ನೆಟ್ಟಿವೆ. ಇಲ್ಲಿ ಚುನಾವಣಾ ಭವಿಷ್ಯವನ್ನು ನುಡಿಯಲು ಚುನಾವಣಾ ಪಂಡಿತರೂ ಸಿದ್ಧರಿಲ್ಲ. ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ರೂಪುಗೊಳ್ಳಲಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದ್ದರೂ ಕೊನೆಯ ಗಳಿಗೆಯಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಸೋಲು ಬಿಜೆಪಿಗೆ ಸಂಕಷ್ಟಗಳನ್ನು ತರಲಿದೆ,ಹೀಗಾಗಿ ಉತ್ತರ ಪ್ರದೇಶದ ಫಲಿತಾಂಶವು ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.
ಬಿಜೆಪಿ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡರೆ ಅದು ಪಕ್ಷದ ಚೌಕಾಶಿ ಸಾಮರ್ಥ್ಯವನ್ನು ಕುಂದಿಸುವುದರಿಂದ ರಾಷ್ಟ್ರಪತಿ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. ಅತ್ತ ಪಂಜಾಬ್‌ನಲ್ಲೂ ಕಳೆದ 10 ವರ್ಷಗಳಿಂದ ರಾಜ್ಯವನ್ನಾಳುತ್ತಿರುವ ಅಕಾಲಿದಳ-ಬಿಜೆಪಿ ಸರಕಾರದ ವಿರುದ್ಧ ಕಾಣಿಸಿಕೊಂಡಿದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಮತ್ತು ಕಾಂಗ್ರೆಸ್ ಹಾಗೂ ಆಪ್‌ಗಳ ತೀವ್ರ ಪ್ರಚಾರದ ಹಿನ್ನೆಲೆಯಲ್ಲಿ ಅಲ್ಲಿಯ ಚುನಾವಣಾ ಫಲಿತಾಂಶವನ್ನೂ ಜನರು ಕಾತುರದಿಂದ ಎದುರು ನೋಡುತ್ತಿದ್ದಾರೆ.







