ಉಳ್ಳಾಲ ಜುಮಾ ನಮಾಝ್ ವಿವಾದ: ಅಪರಾಧಿಗೆ 20 ವರ್ಷ ಕಠಿಣ ಸಜೆ; 8 ಮಂದಿ ಖುಲಾಸೆ

ಮಂಗಳೂರು, ಮಾ. 6: ಉಳ್ಳಾಲದ ದರ್ಗಾ ಸಮೀಪದ ಮಸೀದಿ ಮತ್ತು ಉಳ್ಳಾಲ ಮೇಲಂಗಡಿ ಹೊಸಪಳ್ಳಿಯ ಜುಮಾ ನಮಾಝ್ ಮಾಡುವ ವಿಷಯದಲ್ಲಿ ಉಂಟಾಗಿದ್ದ ಹಲ್ಲೆ, ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಗೆ ಇಲ್ಲಿನ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 8 ಮಂದಿ ವಿರುದ್ಧ ಪ್ರಬಲ ಸಾಕ್ಷಿಗಳು ಇಲ್ಲದ ಕಾರಣ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಉಳ್ಳಾಲ ಆಝಾದ್ ನಗರದ ಇಮ್ತಿಯಾಝ್ (31) ಶಿಕ್ಷೆಗೊಳಗಾದ ಅಪರಾಧಿ.
ಉಳ್ಳಾಲದ ದರ್ಗಾ ಸಮೀಪದ ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವಿಚಾರದಲ್ಲಿ ವಿವಾದ ಉಂಟಾದ ಕಾರಣ ಒಂದು ಗುಂಪು ಉಳ್ಳಾಲ ಮೇಲಂಗಡಿಯ ಹೊಸಪಳ್ಳಿಯಲ್ಲಿ ಪ್ರಾರ್ಥನೆ ಮಾಡಲು ನಿರ್ಧರಿಸಿತ್ತು. ಅದರಂತೆ ಮಂಗಳೂರು ಖಾಝಿ ನೇತೃತ್ವದಲ್ಲಿ ಮೇಲಂಗಡಿಯ ಅಬ್ದುಲ್ ಸವಾದ್, ಉಳ್ಳಾಲ ಅಲೇಕಳದ ಸಂಶುದ್ದೀನ್ ಸಹಿತ ಒಂದು ತಂಡ 2013 ಅ.18ರಂದು ಮಧ್ಯಾಹ್ನ 12.20ರ ಸುಮಾರಿಗೆ ಮೊದಲ ಬಾರಿಗೆ ಪ್ರಾರ್ಥನೆ ಮಾಡಲು ತಯಾರಿ ನಡೆಸಿತ್ತು.
ಈ ಸಂದರ್ಭದಲ್ಲಿ ವಿರೋಧಿ ತಂಡದ ಇಮ್ತಿಯಾಝ್ ಮತ್ತು ಇತರ 8 ಮಂದಿಯ ತಂಡ ಮೇಲಂಗಡಿಯ ಹೊಸಪಳ್ಳಿ ಮಸೀದಿ ಒಳಗಡೆ ಅಕ್ರಮ ಪ್ರವೇಶ ಮಾಡಿ ಸವಾದ್ ಮತ್ತು ಸಂಶುದ್ದೀನ್ ಅವರಿಗೆ ಗಂಭೀರವಾಗಿ ಇರಿದು ಕೊಲೆಗೆ ಯತ್ನಿಸಿತ್ತು ಎಂದು ಆರೋಪಿಸಲಾಗಿತ್ತು. ತೀವ್ರ ಸ್ವರೂಪದ ಗಾಯಗೊಂಡಿದ್ದ ಸಂಶುದ್ದೀನ್ ಮತ್ತು ಸವಾದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂದಿನ ಉಳ್ಳಾಲ ಪೊಲೀಸ್ ಠಾಣೆಯ ಎಸ್‌ಐ ರಮೇಶ್ ಎಚ್.ಹಾನಾಪುರ ಪ್ರಕರಣ ದಾಖಲಿಸಿ ಐಪಿಸಿ ಸೆಕ್ಷನ್ 120, 144, 147, 148, 504, 307, 149 ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಸೋಮವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಚ್.ಪುಷ್ಪಾಂಜಲಿ ದೇವಿ ಅವರು, ಗಾಯಾಳುಗಳು ಮತ್ತು 8 ಮಂದಿ ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಸಿದರು. ಗಾಯಾಳಉಗಳಿಗೆ ಚಿಕಿತ್ಸೆ ನೀಡಿದ ಡಾ. ಮಹಾಬಲ ಶೆಟ್ಟಿ ಮತ್ತು ವಿಧಿ ವಿಜ್ಞಾನ ವಿಭಾಗದ ತಜ್ಞರಾದ ಡಾ. ಗೀತಾಲಕ್ಷ್ಮಿಅವರೂ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ತೀವ್ರ ಸ್ವರೂಪದ ಗಾಯ ಮಾಡಿದ ಪ್ರಕರಣಕ್ಕೆ ಆರೋಪಿ ಇಮ್ತಿಯಾಝ್‌ನಿಗೆ 10 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ಕೊಲೆಯತ್ನ ಪ್ರಕರಣಕ್ಕೆ (ಐಪಿಸಿ ಸೆಕ್ಷನ್ 307) 10 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ಎರಡೂ ಪ್ರಕರಣಗಳಲ್ಲಿ ತಲಾ 10 ವರ್ಷಗಳ ಶಿಕ್ಷೆಯನ್ನು ಪ್ರತ್ಯೇಕವಾಗಿ ಅನುಭವಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ.
ಎರಡೂ ಪ್ರಕರಣಗಳಲ್ಲಿ ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ ಒಂದು ವರ್ಷ ಹೆಚ್ಚುವರಿ ಕಠಿಣ ಶಿಕ್ಷೆ ಅನುಭವಿಸಬೇಕು. ದಂಡ ಮೊತ್ತದಲ್ಲಿ ಇಬ್ಬರಿಗೆ ತಲಾ 5,000 ರೂ.ಗಳನ್ನು ಪರಿಹಾರವಾಗಿ ನೀಡಬೇಕು. ಅಲ್ಲದೆ ಇಬ್ಬರು ಗಾಯಾಳುಳು ಕಲಂ 357 ಎ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ನೆರವು ಪ್ರಾಧಿಕಾರದಿಂದ ಹೆಚ್ಚುವರಿ ಪರಿಹಾರವನ್ನು ಪಡೆಯಲು ಅರ್ಹರು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಪಬ್ಲಿಕ್ ಪ್ಸಾಸಿಕ್ಯೂಟರ್ ನಾರಾಯಣ ಶೇರಿಗಾರ್ ಅವರು ವಾದಿಸಿದ್ದರು.







