ಹೈದರಾಬಾದಾ ವಿಮೋಚನಾ ಹೋರಾಟ ನಡೆದದ್ದು ನಿರಂಕುಶ ಪ್ರಭುತ್ವದ ವಿರುದ್ಧ, ಮುಸ್ಲಿಮರ ವಿರುದ್ಧ ಅಲ್ಲ: ಪ್ರೊ. ಅಲ್ಲಮಪ್ರಭು

ಗಂಗಾವತಿ, ಮಾ.6: ಹೈದರಾಬಾದ್ ವಿಮೋಚನಾ ಹೋರಾಟ ನಡೆದದ್ದು ಮುಸ್ಲಿಂ ಧರ್ಮದ ವಿರುದ್ಧವಲ್ಲ. ಅದು ನಿಜಾಮ ಅರಸರ ನಿರಂಕುಶ ಪ್ರಭುತ್ವದ ವಿರುದ್ಧ ಪ್ರಜಾಸತ್ತೆಯ ರಕ್ಷಣೆಗಾಗಿ ನಡೆದ ಯುದ್ಧ ಮಾದರಿಯ ಜನಾಂದೋಲನ ಎಂದು ಖ್ಯಾತ ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅಭಿಪ್ರಾಯ ಪಟ್ಟರು.
ಅವರು ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದಲ್ಲಿ ಎರಡು ದಿವಸಗಳ ಕಾಲ 'ಹೈದರಾಬಾದ್ ವಿಮೋಚನಾ ಹೋರಾಟ: ಕೊಪ್ಪಳ ಜಿಲ್ಲೆ' ಎಂಬ ವಿಷಯದ ಮೇಲೆ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಂದುವರೆದು ವಿಮೋಚನಾ ಹೋರಾಟದ ಕುರಿತು ಅಧ್ಯಯನಗಳು ಈವರೆಗೆ ಕೇವಲ ಕೆಲವೇ ವರ್ಗದ ಹೋರಾಟವೆಂದು ಪರಿಭಾವಿಸಲಾಗಿದೆ. ಆದರೆ ಮುಸ್ಲಿಮರು ಸಹಿತ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ಹೋರಾಟದಲ್ಲಿ ದುಮುಕಿ ಹುತಾತ್ಮರಾಗಿದ್ದಾರೆ ಅವರ ತ್ಯಾಗ, ಬಲಿದಾನಗಳು, ಚರಿತ್ರೆ ಲೇಖನಗಳಲ್ಲಿ ದಾಖಲಾಗಬೇಕು ಎಂದರು.
ಹಿರಿಯ ವಿದ್ವಾಂಸರಾದ ಡಾ. ಹನುಮಾಕ್ಷಿ ಗೋಗಿ ಮಾತನಾಡಿ ಅಲಕ್ಷಿತ ಚರಿತ್ರೆಯನ್ನು ಕಟ್ಟುವಲ್ಲಿ ವಿಚಾರ ಸಂಕಿರಣಗಳು ಅವಶ್ಯ ಅದನ್ನು ಆಗ ಮಾಡಿದ ಕಾಲೇಜ ಹಾಗೂ ರಾಜ್ಯ ಪತ್ರಾಗಾರ ಇಲಾಖೆಯ ಕಾರ್ಯ ಶ್ಲಾಘನೀಯವೆಂದರು.
ವಿಜಯನಗರ ಶ್ರೀ ಕೃಷದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಬಿ. ಬ್ಯಾಳಿಯವರು ಮುಂದಿನ ವರ್ಷದಿಂದ ಗಂಗಾವತಿ ಹಾಗೂ ಯಲಬುರ್ಗಾಗಳಲ್ಲಿ ಸ್ನಾತಕೊತ್ತರ ಕೇಂದ್ರಗಳನ್ನು ಸ್ಥಾಪಿಸಲಾಗುವುದೆಂದರು.
ನಿವೃತ್ತ ಶಿಕ್ಷಕರಾದ ಸಿ.ಎಚ್. ನಾರಿನಾಳ ಆಶಯ ನುಡಿಗಳನ್ನಾಡಿದರು.
ಮುನಿಯಪ್ಪ ಹುಬ್ಬಳ್ಳಿ ಕೋಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸದಸ್ಯರರಾದ ಹೆಚ್.ಎಂ. ಮಂಜುನಾಥ ವಕೀಲರು ಮಾತನಾಡಿದರು.
ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ ಸ್ವಾಗತಿಸಿದರು. ಕಾಲೇಜಿನ ಚೇರಮನ್ ಕೆ. ಚನ್ನಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಡಾ. ಸುರೇಶಗೌಡ ನಿರೂಪಿಸಿದರು. ಪ್ರೊ. ಎಂ. ಬಸವರಾಜ ವಂದನಾರ್ಪಣೆ ಮಾಡಿದರು. ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು, ವಿವಿಧ ಕಾಲೇಜುಗಳಿಂದ ಆಗಮಿಸಿದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.







