ಮೆಸ್ಕಾಂ ಅವಘಡ ಘಟನೆ ಮರುಕಳಿಸದಿರುವಂತೆ ಎಚ್ಚರ ವಹಿಸಲು ಸೂಚನೆ
ಪುತ್ತೂರು ಕೆಡಿಪಿ ಮಾಸಿಕ ಸಭೆ

ಪುತ್ತೂರು, ಮಾ.6: ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಹಲವು ಅವಘಡಗಳು ಸಂಭವಿಸುತ್ತಿದ್ದು, ತಾಲೂಕಿನ ಸೊರಕೆಯಲ್ಲಿ ನಡೆದ ಅವಘಡದಲ್ಲಿ ಮೆಸ್ಕಾಂ ಲೈನ್‌ಮೆನ್ ಶ್ರೀಶೈಲ ಅವರು ಮೃತಪಟ್ಟಿದ್ದು, ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿಗೆ ತಾಲೂಕು ಮಾಸಿಕ ಕೆಡಿಪಿ ಸಭೆಯಲ್ಲಿ ತಾ.ಪಂ. ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದರು.
ಮಾಸಿಕ ಕೆಡಿಪಿ ಸಭೆಯು ಸೋಮವಾರ ಅಧ್ಯಕ್ಷೆ ಭವಾನಿ ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಇಲಾಖೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಅವರು ಮೊನ್ನೆ ಸೊರಕೆಯಲ್ಲಿ ನಡೆದ ಅವಘಡಕ್ಕೆ ಮೆಸ್ಕಾಂ ಬೇಜವಾಬಾರಿಯೇ ಕಾರಣವಾಗಿದ್ದು, ಇಂತಹ ಹಲವು ಘಟನೆಗಳು ಅಲ್ಲಲ್ಲಿನಡೆಯುತ್ತಿದೆ. ಎಚ್‌ಟಿ ಲೈನನ್ನು ಆಫ್ ಮಾಡದೆ ಸಿಬ್ಬಂದಿಯನ್ನು ಕಂಬಕ್ಕೆ ಹತ್ತಿಸಿದ್ದು ಸರಿಯಲ್ಲ. ಈ ಬಗ್ಗೆ ನಿಮಗೆ ಎಚ್ಚರ ಇರಬೇಕಾಗಿತ್ತು ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷರು ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿ ಹಾಗೂ ಮೃತರಿಗೆ ಪರಿಹಾರವನ್ನು ಒದಗಿಸುವ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಉತ್ತರಿಸಿದ ಮೆಸ್ಕಾಂ ಸಹಾಯಕರ ಕಾರ್ಯನಿರ್ವಾಹಕ ಅಭಿಯಂತರರಾದ ರಾಮಚಂದ್ರ ಅವರು ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಲಾಗಿದೆ. ಪರಿಹಾರ ವಿತರಣೆಗೆ ಇಲಾಖಾ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಮುಂದಿನ ಒಂದೂವರೆ ತಿಂಗಳ ಒಳಗಾಗಿ ಮೃತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶದಲ್ಲಿ ಓವರ್ ಲೋಡಿಂಗ್ ಆಗುತ್ತಿರುವ ಕಾರಣ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದ ರಾಮಚಂದ್ರ ಅವರು ಉದ್ದೇಶಪೂರ್ವಕವಾಗಿ ಲೋಡ್‌ಶೆಡ್ಡಿಂಗ್ ಮಾಡುತ್ತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಲೋಡ್‌ಶೆಡ್ಡಿಂಗ್ ಮಾಡುವುದು ಅನಿವಾರ್ಯವಾಗಿದೆ ಎಂದರು. ಮಕ್ಕಳ ಪರೀಕ್ಷಾ ಅವಧಿಯಲ್ಲಿ ಲೋಡ್‌ಶೆಡ್ಡಿಂಗ್ ಕಡಿತಗೊಳಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಅವರು ಅಧಿಕಾರಿಗೆ ಸೂಚಿಸಿದರು.
ಆರ್ಥಿಕ ವರ್ಷವು ಮಾರ್ಚ್‌ಗೆ ಮುಕ್ತಾಯವಾಗುತ್ತಿರುವುದರಿಂದ ಬಾಕಿಯಾಗಿರುವ ಎಲ್ಲಾ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗಳು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ತಿಳಿಸಿದರು.
ಪಾಲನಾ ವರದಿ ನೀಡಿದ ಉಪತಹಸೀಲ್ದಾರ್ ಶ್ರೀಧರ್ ಅವರು ತಾಲೂಕಿನ ಎಲ್ಲಾ ಫಲಾನುಭವಿಗಳಿಗೆ ವಿಧವಾ ವೇತನವನ್ನು ನಿಗದಿತ ಅವಧಿಯೊಳಗೆ ಮಂಜೂರುಗೊಳಿಸಿ ಪಾವತಿಸಲಾಗುತ್ತಿದೆ. ಯಾವುದೇ ವಿಧವಾ ವೇತನವನ್ನು ಸಕಾರಣವಿಲ್ಲದೆ ಕಡಿತಗೊಳಿಸಿರುವುದಿಲ್ಲ. ರೇಶನ್ ಕಾರ್ಡ್‌ಗಳನ್ನು ಪಂಚಾಯತ್ ಮೂಲಕ ವಿತರಣೆ ಮಾಡಲು ಈಗಾಗಲೇ ಸರ್ಕಾರದ ಆದೇಶ ಬಂದಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರು ಪಂಚಾಯತ್‌ನಲ್ಲಿ ಆಧಾರ್ ದಾಖಲೆಯನ್ನು ನೀಡಿ ರೇಶನ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ತನ್ನ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಲೆಕ್ಕಾಧಿಕಾರಿ ಗಣಪತಿ ಭಟ್ ಉಪಸ್ಥಿತರಿದ್ದರು.







