ಭಯೋತ್ಪಾದಕತೆ ವಿರೋಧಿ ಒಡಂಬಡಿಕೆ : ಶೀಘ್ರ ಅಂಗೀಕಾರಕ್ಕೆ ಭಾರತ ಒತ್ತಾಯ

ಹೊಸದಿಲ್ಲಿ, ಮಾ.6: ಭಯೋತ್ಪಾದಕತೆಯು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಎದುರಾಗಿರುವ ಏಕೈಕ ಬೃಹತ್ ಅಪಾಯವಾಗಿದ್ದು ಇದರ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಪೂರಕವಾಗುವಂತೆ ಜಾಗತಿಕ ಒಡಂಬಡಿಕೆಯನ್ನು ವಿಶ್ವಸಂಸ್ಥೆ ಅತೀ ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ಭಾರತ ಹೇಳಿದೆ.
ಪಾಕಿಸ್ತಾದ ಪಾತ್ರವನ್ನು ಪರೋಕ್ಷವಾಗಿ ಉಲ್ಲೇಖಿಸಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಭಾರತ ಮತ್ತು ಅಪಘಾನಿಸ್ತಾನ ಹಲವಾರು ದಶಕಗಳಿಂದ ಪರ್ಯಾಯ ಯುದ್ದದ ಬಲಿಪಶುವಾಗಿದ್ದು , ಭಯೋತ್ಪಾದಕ ಜಾಲದ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ವೇಗ ನೀಡಲು ಏಶ್ಯಾದ ಸಂಘಟಿತ ಕ್ರಿಯೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ಭಯೋತ್ಪಾದಕತೆಯ ವಿಷಯದ ಸಮಗ್ರ ಒಡಂಬಡಿಕೆಯನ್ನು ಶೀಘ್ರ ಅಂಗೀಕರಿಸಬೇಕೆಂದು ಒತ್ತಾಯಿಸಿದ ಅವರು, ಭಯೋತ್ಪಾದಕತೆಯ ಅಂತರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಗಂಭೀರ ಮತ್ತು ವ್ಯಾಪಕ ಸವಾಲಾಗಿದೆ ಎಂದು ತಿಳಿಸಿದ್ದಾರೆ.
ದಿಲ್ಲಿಯ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆ ಆಯೋಜಿಸಿದ್ದ ಸಮಾವೇಶದಲ್ಲಿ ಭಯೋತ್ಪಾದಕತೆಯ ವಿರುದ್ಧ ಹೋರಾಟ ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು. ಭಯೋತ್ಪಾದಕರ ತಂಡಗಳಿಗೆ ಹಣಕಾಸಿನ ನೆರವು ನೀಡುತ್ತಿರುವ , ಅವರ ಸಿದ್ಧಾಂತಗಳಿಗೆ ಬೆಂಬಲ ನೀಡುವ ಹಾಗೂ ಅವರಿಗೆ ಆಶ್ರಯ ನೀಡುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಪಾರಿಕ್ಕರ್, ಅಂತರಾಷ್ಟ್ರೀಯ ಭಯೋತ್ಪಾದಕತೆಯ ವಿಷಯದ ಒಡಂಬಡಿಕೆಯಲ್ಲಿ ಈ ವಿಷಯಗಳನ್ನು ಸೇರಿಸಿಕೊಳ್ಳಬೇಕು ಎಂದು ಭಾರತವು ಪ್ರಯತ್ನಿಸುತ್ತಿದೆ ಎಂದರು.
ಏಶ್ಯಾವು ಹಲವಾರು ಕರಾಳ ಭಯೋತ್ಪಾದಕ ಜಾಲದ ಬಲಿಪಶುವಾಗಿದ್ದು , ಏಶ್ಯಾದಿಂದ ದೃಢವಾದ ಪ್ರಯತ್ನಗಳು ನಡೆದರೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾಕತೆಯನ್ನು ನಿಗ್ರಹಿಸುವ ಹೋರಾಟ ತೀವ್ರಗೊಳಿಸಲು ಹೆಚ್ಚಿನ ಒತ್ತಡ ಹೇರಿದಂತಾಗುತ್ತದೆ ಎಂದವರು ಹೇಳಿದರು. ಜಾಗತಿಕ ಮಟ್ಟದಲ್ಲಿ ನಡೆಯುವ ಭಯೋತ್ಪಾದಕ ದಾಳಿಯಲ್ಲಿ ಶೇ.7ರಷ್ಟು ದಾಳಿಗಳು ಭಾರತದಲ್ಲಿ ನಡೆಯುತ್ತಿವೆ. ಭಯೋತ್ಪಾದಕರ ಶಿಬಿರಗಳನ್ನು ಮುಚ್ಚುವಂತೆ, ಎಲ್ಲಾ ಭಯೋತ್ಪಾದಕ ತಂಡಗಳ ಮೇಲೆ ನಿಷೇಧ ಹೇರಲು, ವಿಶೇಷ ಕಾನೂನಿನ ಮೂಲಕ ಭಯೋತ್ಪಾದಕರ ವಿಚಾರಣೆ ನಡೆಸಲು ಮತ್ತು ಶಿಕ್ಷಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನ ನಿರಂತರ ಸಾಗಲಿದೆ . ಕಳೆದ ವರ್ಷಕ್ಕೆ ಹೋಲಿಸಿದರೆ, 2016ರಲ್ಲಿ ಭಯೋತ್ಪಾದಕತೆಯ ಪ್ರಮಾಣದಲ್ಲಿ ಶೇ.6ರಷ್ಟು ವೃದ್ಧಿಯಾಗಿದೆ ಎಂದು ಜಾಗತಿಕ ವರದಿಯೊಂದನ್ನು ಉಲ್ಲೇಖಿಸಿ ಪಾರಿಕ್ಕರ್ ತಿಳಿಸಿದರು.
ಐಸಿಸ್, ಬೊಕೊ ಹರಾಮ್, ತಾಲಿಬಾನ್ ಮತ್ತು ಅಲ್‌ಖಾಯ್ದ - ಈ ನಾಲ್ಕು ತಂಡಗಳು ಶೇ.74ರಷ್ಟು ಭಯೋತ್ಪಾದಕ ಪ್ರಕರಣಕ್ಕೆ ಕಾರಣವಾಗಿವೆ . 2016ರಲ್ಲಿ ಐಸಿಸ್‌ಗೆ ಸಂಯೋಜಿಸಲ್ಪಟ್ಟಿರುವ ಭಯೋತ್ಪಾದಕ ತಂಡಗಳು 29 ದೇಶಗಳಲ್ಲಿ ಭಯೋತ್ಪಾದಕ ದಾಳಿ ನಡೆಸಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ವಿಶ್ವದ ಸುಮಾರು 60 ಮಿಲಿಯನ್ ಜನರು ಸಂಘರ್ಷ ಮತ್ತು ಹಿಂಸೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಜಾಲವನ್ನು ನಿಗ್ರಹಿಸಬೇಕಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳನ್ನು ಭಯೋತ್ಪಾದಕ ಗುಂಪುಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ತಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹನೀಫ್ ಅಟ್ಮರ್, ರಾಷ್ಟ್ರ ಪ್ರಾಯೋಜಿತ ಭಯೋತ್ಪಾದಕತೆಯನ್ನು ಕೊನೆಗೊಳಿಸುವ ಅಗತ್ಯವಿದೆ ಎಂದು ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದರು.







