ಬಂಟಕಲ್: ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಶಿರ್ವ, ಮಾ.6: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ವಿಭಾಗ, ರೋಟರ್ಯಾಕ್ಟ್ ಘಟಕಗಳ ಸಹಯೋಗದೊಂದಿಗೆ ವಿಶೇಷ ಮಕ್ಕಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಇತ್ತೀಚೆಗೆ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಪಾಂಬೂರಿನಲ್ಲಿರುವ ಮಾನಸ ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನದ ಕೆಲವು ಪ್ರಾತ್ಯಕ್ಷಿಕೆಗಳನ್ನು ತೋರಿಸಿ ಅದರ ಉಪಯೋಗಗಳನ್ನು ವಿವರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಹಾಗೂ ಮಾನಸದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಮಾನಸದ ವಿದ್ಯಾಲಯದ ಸುಮಾರು 50 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು.
ಮಾನಸ ಪುನರ್ವಸತಿ ಕೇಂದ್ರದ ಉಪಾಧ್ಯಕ್ಷ ಹೆನ್ರಿ ಮಿನೇಜಸ್ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ನಾಗರಾಜ್ ರಾವ್ ಉಪಸ್ಥಿತರಿದ್ದರು.
ಸಂಜಯ್ ವಿಜ್ಞಾನ ದಿನದ ಮಹತ್ವ ತಿಳಿಸಿದರು. ಮೇಘ ಸಾಮಗ ಸ್ವಾಗತಿಸಿ ವಂದಿಸಿದರು.





