ಪುತ್ತೂರು: ಎಬಿವಿಪಿ ದಾಂಧಲೆ ವಿರುದ್ದ ಸಿಎಫ್‌ಐ ಪ್ರತಿಭಟನೆ

ಪುತ್ತೂರು, ಮಾ.6: ದೆಹಲಿಯ ರಾಮಜಸ್ ಕಾಲೇಜಿನಲ್ಲಿ ನಡೆಯುವ ವಿಚಾರ ಸಂಕಿರಣಕ್ಕೆ ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್ ಮತ್ತು ಉಮ್ಮರ್ ಖಾಲಿದ್ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ನಡೆಸಿದ ಹಲ್ಲೆ ಮತ್ತು ದಾಂಧಲೆ ಘಟನೆಯನ್ನು ಖಂಡಿಸಿ ಹಾಗೂ ಸಂಸದ ಪ್ರತಾಪಸಿಂಹ ಕ್ಷಮೆಯಾಚನೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಪುತ್ತೂರು ತಾಲೂಕು ಘಟಕದ ವತಿಯಿಂದ ಸೋಮವಾರ ಸಂಜೆ ಪುತ್ತೂರಿನ ಬಸ್ ನಿಲ್ದಾಣದ ಗಾಂಧಿ ಕಟ್ಟೆಯ ಬಳಿ ಪ್ರತಿಭಟನೆ ನಡೆಯಿತು.
ಎಬಿವಿಪಿಯವರು ನಡೆಸಿದ ಈ ಹಲ್ಲೆ ಘಟನೆಯನ್ನು ವಿರೋಧಿಸಿದ ಕಾರಣಕ್ಕಾಗಿ ಲೇಡಿ ಶ್ರೀರಾಮ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್ ಕೌರ್‌ಗೆ ಬೆದರಿಕೆಗಳು ಬರುವಂತಾಗಿದೆ. ಇದು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮೌನವಹಿಸಿರುವುದು ಕಿಡಿಗೇಡಿಗಳಿಗೆ ಮತ್ತಷ್ಟು ಅಪರಾಧ ಎಸಗಲು ಪ್ರೇರೇಪಿಸಿದಂತಾಗಿದೆ. ಸಂಸದ ಪ್ರತಾಪಸಂಹ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ವಿದ್ಯಾರ್ಥಿನಿಯನ್ನು ಭೂಗತ ಜಗತ್ತಿನ ದಾವೂದ್ ಇಬ್ರಾಹಿಂಗೆ ಹೋಲಿಸಿರುವುದು ಖಂಡನೀಐ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಡೀ ಮಹಿಳಾ ಸಮಾಜವೇ ತಲೆತಗ್ಗಿಸುವಂತಹ ಹೇಳಿಕೆ ನೀಡಿರುವ ಸಂಸದ ಪ್ರತಾಪಸಿಂಹ ಅವರ ವಿರುದ್ದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ವಿದ್ಯಾರ್ಥಿನಿಯ ಮಾನಹರಣ ಮಾಡಿದ ಪ್ರತಾಪ ಸಿಂಹ ಅವರು ಬೇಷರತ್ ಕ್ಷಮೆಯಾಚಿಸಬೇಕು. ರಾಮದಾಸ್ ಕಾಲೇಜಿನಲ್ಲಿ ದಾಂಧಲೆ ನಡೆಸಿದ ಎಬಿವಿಪಿ ಕಾರ್ಯಕರ್ತರನ್ನು ಕಾಲೇಜಿನಿಂದ ವಜಾಗೊಳಿಸಬೇಕು. ಚಿಕ್ಕಬಳ್ಳಾಪುರ ಸಮೀಪದ ಗುಡಿಬಂಡೆ ಎಂಬಲ್ಲಿ ಮೇಲ್ಜಾತಿಯ ಹುಡುಗಿಯ ಜತೆ ಸ್ನೇಹ ಹೊಂದಿದ್ದನೆಂಬ ಕಾರಣಕ್ಕಾಗಿ ಮುರಳಿ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಹಾಗೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಮುರಳಿ ಶವ ಪತ್ತೆಯಾದ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಆತನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಎಫ್‌ಐ ರಾಜ್ಯ ಸಮಿತಿಯ ಸದಸ್ಯ ಇರ್ಷಾದ್ ಕಾವು, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಶಿಯಾಬ್,ಜಿಲ್ಲಾ ಸಮಿತಿಯ ಸದಸ್ಯ ಬಾದಾಷಾ ತೋಡಾರ್ ಮಾತನಾಡಿದರು.
ಸಿಎಫ್‌ಐ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸವಾದ್ ಕಲ್ಲರ್ಪೆ, ಸದಸ್ಯರಾದ ಅಸೀಸ್ ಕುಂಬ್ರ,ನಾಸೀರ್ ಕಲ್ಲರ್ಪೆ,ಶಂಸೀರ್‌ಸವಣೂರು,ಸಾದಾತ್ ಅಂಕತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.







