ದ್ವೇಷ ಸಾಧನೆಗಾಗಿ ದರೋಡೆಯ ಸುಳ್ಳು ಕಥೆ !
ಪೊಲೀಸ್ ಇಲಾಖೆಯನ್ನು ಬೆಸ್ತು ಬೀಳಿಸಿದ ಪ್ರಕರಣ
ಉಪ್ಪಿನಂಗಡಿ, ಮಾ.6: ದ್ವೇಷ ಸಾಧನೆಗಾಗಿ ದರೋಡೆಯ ಸುಳ್ಳು ಕಥೆ ಸೃಷ್ಟಿಸಿದ ಲಾರಿ ಚಾಲಕನೋರ್ವ ಪೊಲೀಸ್ ಇಲಾಖೆಯನ್ನೇ ಬೇಸ್ತು ಬೀಳಿಸಿದಲ್ಲದೆ, ಪೊಲೀಸರ ಅಲೆದಾಟಕ್ಕೆ ಕಾರಣನಾದ ಘಟನೆ ರವಿವಾರ ನಡೆದಿದೆ. ಆದರೆ ಪೊಲೀಸರ ಕೂಲಂಕಷ ವಿಚಾರಣೆಯಿಂದಾಗಿ ಅಮಾಯಕರು ಶಿಕ್ಷೆಗೊಳಗಾಗುವುದು ತಪ್ಪಿದಂತಾಗಿದೆ.
ಸುಳ್ಯ ಮೂಲದ ಗಣೇಶ ಎಂಬಾತ ಲಾರಿ ಚಾಲಕನಾಗಿದ್ದು, ರವಿವಾರ ಈತ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಂಡವೊಂದು ದರೋಡೆ ನಡೆಸಿ ಪರಾರಿಯಾಗಿದೆ ಎಂದು ಮಾಹಿತಿ ನೀಡಿ ಹಾಗೂ ದರೋಡೆ ನಡೆಸಿದ ತಂಡ ಸಂಚರಿಸಿದ ಕಾರೊಂದರ ನಂಬರ್ ನೀಡಿದ್ದ. ಈತ ನೀಡಿದ ಮಾಹಿತಿಯನ್ನಾಧರಿಸಿ ದರೋಡೆ ತಂಡವನ್ನು ಹಿಡಿಯಲು ಉಪ್ಪಿನಂಗಡಿ ಪೊಲೀಸರು ಭರ್ಜರಿ ತಯಾರಿ ನಡೆಸಿದ್ದರು.
ಪೆರ್ನೆ ಸಮೀಪದ ಕಡಂಬು ಬಳಿ ಉಪ್ಪಿನಂಗಡಿ ಪೊಲೀಸ್ ಠಾಣಾ ಎಸ್ಸೈ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ, ಹೆದ್ದಾರಿ ಗಸ್ತು ದಳ ಹಾಗೂ ಪೊಲೀಸ್ ಸಿಬ್ಬಂದಿ ಹೀಗೆ ಪೊಲೀಸರ ದಂಡು ದರೋಡೆಕೋರರ ತಂಡವನ್ನು ಹಿಡಿಯಲು ಹೊಂಚು ಹಾಕಿ ಕುಳಿತಿತ್ತು. ಸಂಜೆಯಾಗುತ್ತಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಈತ ನೀಡಿದ ನೀಡಿದ ನಂಬರ್‌ನ ಕಾರೊಂದು ಬಂದಿದ್ದು, ತಕ್ಷಣವೇ ಸಿನೆಮಾ ಶೈಲಿಯಲ್ಲಿ ಪೊಲೀಸರ ತಂಡ ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿತು.
ಪೊಲೀಸರು ತಮ್ಮ ವಾಹನಕ್ಕೆ ಮುತ್ತಿಗೆ ಹಾಕಿರುವುದನ್ನು ಕಂಡು ಹೆದರಿ ಕಾರಿನ ಬಾಗಿಲು ತೆರೆಯಲೇ ಇಲ್ಲ. ಬಳಿಕ ಮತ್ತಷ್ಟು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ, ಕಾರಿನ ಬಾಗಿಲನ್ನು ಒತ್ತಾಯವಾಗಿ ತೆರೆಸಿ, ಅದರಲ್ಲಿದ್ದ ಬೆಂಗಳೂರು ಮೂಲದ ಅಕ್ಷಯ್, ಶ್ರೀಧರ್, ನಾಗರಾಜ್ ಸೇರಿದಂತೆ ಒಟ್ಟು 9 ಜನರನ್ನು ವಶಕ್ಕೆ ಪಡೆದು, ಇವರ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಜೀಪಿನಲ್ಲಿ ಹಾಕಿ ಸಂಪ್ಯ ಠಾಣೆಗೆ ಕರೆದುಕೊಂಡು ಹೋದರು ಎಂದು ತಿಳಿದು ಬಂದಿದೆ.
ಹೆದ್ದಾರಿ ದರೋಡೆಯ ತಂಡವೆಂಬ ಮಾಹಿತಿಯ ಆಧಾರದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ವಿಚಾರಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಸಂಪ್ಯಕ್ಕೆ ಆಗಮಿಸುವ ತಯಾರಿಯು ನಡೆದಿತ್ತು. ಆದರೆ, ಠಾಣೆಯಲ್ಲಿ ಇವರ ಪ್ರಾಥಮಿಕ ವಿಚಾರಣೆಯಿಂದಲೇ ಸತ್ಯಾಂಶ ಬಯಲಾದಾಗ ಬೇಸ್ತು ಬೀಳುವ ಸರದಿ ಪೊಲೀಸರದ್ದಾಗಿತ್ತು.
ಘಟನೆಯ ವಿವರ:
ಎರಡು ಕಾರುಗಳಲ್ಲಿ ಬೆಂಗಳೂರಿನ ತಂಡವೊಂದು ಮುರುಡೇಶ್ವರಕ್ಕೆ ತೆರಳಿ, ಅಲ್ಲಿಂದ ಅವರು ಕೊಡ್ಲಿಪೇಟೆಗೆ ತೆರಳುವವರಿದ್ದರು. ಗಣೇಶ್ ಎಂಬಾತ ಲಾರಿಯಲ್ಲಿ ಮಂಗಳೂರು ಕಡೆಗೆ ಬರುತ್ತಿದ್ದ. ಈ ನಡುವೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಕಾರಿನಲ್ಲಿದ್ದವರು ಲಾರಿಯನ್ನು ಓವರ್‌ಟೇಕ್ ಮಾಡಲು ಮುಂದಾಗಿದ್ದು, ಆಗ ಲಾರಿಯವ ಸೈಡ್ ಕೊಟ್ಟಿರಲಿಲ್ಲ.
ಹೀಗೆ ಈತ ಓವರ್‌ಟೇಕ್‌ಗೆ ಅಡ್ಡಿಪಡಿಸಿದಾಗ ಶಿರಾಡಿ ಘಾಟಿಯ ಕೆಂಪು ಹೊಳೆ ಬಳಿ ಲಾರಿಯ ಎಡಗಡೆಯಿಂದ ಓವರ್‌ಟೇಕ್ ಮಾಡುವ ಮೂಲಕ ಕಾರಿನವರು ನಿಯಮವನ್ನು ಉಲ್ಲಂಘಿಸಿದ್ದರಲ್ಲದೆ, ಲಾರಿಗೆ ಕಾರನ್ನು ಅಡ್ಡವಿಟ್ಟು ಓವರ್‌ಟೇಕ್ ಮಾಡಲು ಅಡ್ಡಿ ಪಡಿಸಿರುವುದಕ್ಕೆ ಆಕ್ಷೇಪಿಸಿದ್ದರು. ಆಗ ಕಾರಿನಿಂದ ಮೂರು ಮಂದಿ ಕೆಳಗಿಳಿದಿದ್ದು, ಲಾರಿ ಚಾಲಕ ಮತ್ತು ಇವರ ಮಧ್ಯೆ ಹೊ-ಕೈಯೂ ನಡೆದಿತ್ತು. ಬಳಿಕ ಪ್ರಯಾಣ ಮುಂದುವರಿಸಿದ್ದರು ಎಂದು ತಿಳಿದು ಬಂದಿದೆ.
ಲಾರಿ ಚಾಲಕ ದ್ವೇಷ ಸಾಧನೆಗಾಗಿ ಈ ರೀತಿ 'ಸುಳ್ಳು ದರೋಡೆ ಕಥೆ' ಸೃಷ್ಟಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಯಿತು. ಬಳಿಕ ಎರಡೂ ಕಡೆಯವರಿಂದಲೂ ಮುಚ್ಚಳಿಕೆಯನ್ನು ಬರೆಸಿ ಬಿಟ್ಟುಬಿಟ್ಟರು.
ಹೀಗೆ ಸುಳ್ಳು ಮಾಹಿತಿ ನೀಡುವ ಮೂಲಕ ಇಲಾಖೆಯ ದಿಕ್ಕು ತಪ್ಪಿಸಿ ಪೊಲೀಸರ ಅಲೆದಾಟಕ್ಕೆ ಕಾರಣನಾದ ಲಾರಿ ಚಾಲಕನಿಗೆ ಕಾನೂನು ಶಿಕ್ಷೆಗೆ ಒಳಪಡಿಸಬೇಕಿತ್ತು ಎಂಬುದು ಸಾರ್ವಜನಿಕರ ಒತ್ತಾಯವಾಗಿತ್ತು.







