ಈ ವ್ಯಕ್ತಿ ಕಳೆದ 58 ವರ್ಷಗಳಿಂದ ನೀರು ಕುಡಿದಿಲ್ಲ, ವೈದ್ಯರ ಬಳಿ ಹೋಗಿಲ್ಲ !
ನಂಬಿದರೆ ನಂಬಿ, ಬಿಟ್ಟರೆ ಬಿಡಿ

ಕೈರೋ, ಮಾ.7: ಉತ್ತರ ಈಜಿಪ್ಟ್ ನ ಕಫ್ರ್ ಎಲ್-ಶೇಖ್ ರಾಜ್ಯದ ಗ್ರಾಮವೊಂದರ ಮೇಯರ್ ಆಗಿರುವ ಅಲಿ ಗ್ನೀಶ್ ಎಂಬವರಿಗೆ 76 ವರ್ಷ ವಯಸ್ಸು. ಆದರೆ ಅವರು ಒಂದು ರೀತಿಯಲ್ಲಿ ವಿಸ್ಮಯಕಾರಿ ವ್ಯಕ್ತಿ. ಅವರೇ ಹೇಳುವಂತೆ ಕಳೆದ 58 ವರ್ಷಗಳಿಂದ ಅವರು ನೀರು, ಚಹಾ ಅಥವಾ ಕಾಫಿ ಸೇವಿಸಿಯೇ ಇಲ್ಲ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಅವರು ಒಂದೇ ಒಂದು ಬಾರಿ ವೈದ್ಯರಲ್ಲಿ ಹೋಗಿಲ್ಲ. ಅಲಿ ಗ್ನೀಶ್ ಪ್ರಕಾರ ಅವರು ಕಳೆದ 58 ವರ್ಷಗಳಲ್ಲಿ ಹೆಚ್ಚು ನೀರಿನಂಶವಿರುವ ತರಕಾರಿಗಳಾದ ಬಸಳೆ ಅಥವಾ ಬಟಾಟೆ ಕೂಡ ಸೇವಿಸಿಲ್ಲ.
ತಮ್ಮ ಕಥೆಯನ್ನು ಹೀಗೆಂದು ಬಿಚ್ಚಿಡುತ್ತಾರೆ ಅಲಿ ಗ್ನೀಶ್. 1959ರಲ್ಲಿ ಅವರ ಮದುವೆಯಾಗಿ ಕೇವಲ ಮೂರು ತಿಂಗಳಷ್ಟೇ ಆಗಿತ್ತು. ಒಂದು ದಿನ ಅವರಿಗೆಷ್ಟು ಬಾಯಾರಿಕೆ ಆಗಿತ್ತೆಂದರೆ ಅವರು ಬಾಯಾರಿಕೆ ನೀಗಲೆಂದು ಅದೆಷ್ಟು ನೀರು ಕುಡಿದರೆಂದರೆ ಅವರು ವೈದ್ಯರ ಬಳಿ ಹೋಗಬೇಕಾಗಿ ಬಂದಿತ್ತು. ಅತಿಯಾದ ನೀರು ಸೇವನೆಯಿಂದ ಹೊಟ್ಟೆಯಲ್ಲಿ ಉರಿಯೂತ ಕಾಣಿಸಿಕೊಂಡಿದೆ ಎಂದು ಅವರು ವೈದ್ಯರಲ್ಲಿ ದೂರಿಕೊಂಡಿದ್ದರು. ಉರಿಯೂತ ಕಡಿಮೆಯಾಗುವವರೆಗೆ ಸ್ವಲ್ಪ ಸಮಯ ನೀರು ಕುಡಿಯುವುದನ್ನು ನಿಲ್ಲಿಸುವಂತೆ ಅವರ ವೈದ್ಯರು ಹೇಳಿದ್ದರು. ಆದರೆ ಸಮಸ್ಯೆ ಕಡಿಮೆಯಾಗಲೇ ಇಲ್ಲ. ಸ್ವಲ್ಪ ಸಮಯದ ನಂತರ ನೀರು ಕುಡಿದಾಗ ಮತ್ತೆ ನೋವು ಕಾಣಿಸಿಕೊಂಡಿತ್ತು. ಅವರ ತಂದೆಯ ಸ್ನೇಹಿತರಾಗಿದ್ದ ರೈತರೊಬ್ಬರು ಕಬ್ಬಿನ ರಸ ಕುಡಿಯುವಂತೆ ಹೇಳಿದರೂ ಅದನ್ನು ಕುಡಿದಾಗಲೂ ನೋವು ಕಾಣಿಸಿಕೊಂಡಿತ್ತು. ಮತ್ತೆ ಅದೇ ವ್ಯಕ್ತಿಯ ಸಲಹೆಯಂತೆ ಅವರು ಕೆಂಪು ಕಬ್ಬಿನ ರಸ ಕುಡಿದರು ಆದರೆ ಈ ಬಾರಿ ಅವರಿಗೆ ನೋವು ಕಾಡಲಿಲ್ಲ.
ಅಂದಿನಿಂದ ಅವರು ಕೆಂಪು ಕಬ್ಬಿನ ರಸವನ್ನು ನೀರಿನ ಬದಲು ಸೇವಿಸಲಾರಂಭಿಸಿದ್ದರೂ ಈ ರಸವನ್ನು ತರಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಅವರಿರುವ ಗ್ರಾಮದಿಂದ ಕಬ್ಬಿನ ರಸ ತಯಾರಿಸುವ ನಗರಗಳು ಬಹಳಷ್ಟು ದೂರದಲ್ಲಿತ್ತು. ಆಗ ಮೇಯರ್ ಆಗಿದ್ದ ಅವರ ತಂದೆ ರಸ ತೆಗೆಯುವ ಸಾಧನವನ್ನು ತರಿಸಿದರಲ್ಲದೆ ಒಂದು ಸಣ್ಣ ತುಂಡು ಭೂಮಿಯಲ್ಲಿ ಕೆಂಪು ಕಬ್ಬನ್ನು ಬೆಳೆಸಲಾರಂಭಿಸಿದರು. ಮುಂದೆ ಅವರಿಗೆ ಅವರ ಅಳಿಯ ಒಂದು ಆಧುನಿಕ ಜ್ಯೂಸರ್ ತಂದು ಕೊಟ್ಟರು. ಅಂದಿನಿಂದ ಕೆಂಪು ಕಬ್ಬಿನ ರಸ ಬಿಟ್ಟು ನೀರು ಅಥವಾ ನೀರಿನಂಶವಿರುವ ಎಲ್ಲಾ ವಸ್ತುಗಳನ್ನೂ ವರ್ಜಿಸಿದ ಅವರು ಆರೋಗ್ಯದಿಂದಿದ್ದಾರೆ. ಹಜ್ ಯಾತ್ರೆಗೆ ಹೋಗಿದ್ದ ಸಂದರ್ಭ ಕೂಡ ಅವರು ತಮ್ಮೊಂದಿಗೆ ಕೆಲ ಕೆಂಪು ಕಬ್ಬಿನ ತುಂಡುಗಳನ್ನು ತೆಗೆದುಕೊಂಡು ಹೋಗಿ ಅವುಗಳ ರಸ ಹಿಂಡಿ ಸೇವಿಸಿದ್ದರು.
ನೀರು ಕುಡಿಯದೇ ಇರುವುದರಿದ ತನ್ನ ಕಿಡ್ನಿಗಳು ಕೂಡ ಸಮಸ್ಯೆಗೀಡಾಗಿಲ್ಲ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದಾರೆ.







