ಎಮಿರೇಟ್ಸ್ ಐಡಿ ಈಗ ಕೇವಲ ಗುರುತಿನ ಚೀಟಿ ಅಲ್ಲ
ಐಡಿ ಬಳಸಿ ವಿಮೆ ಸೌಲಭ್ಯ ಪಡೆಯಿರಿ

ದುಬೈ, ಮಾ.7: ತಮ್ಮ ಎಮಿರೇಟ್ಸ್ ಐಡಿಯನ್ನು ಸಂಯುಕ್ತ ಅರಬ್ ಸಂಸ್ಥಾನದ ಸಾವಿರಾರು ನಾಗರಿಕರು ವಿಮಾನ ನಿಲ್ದಾಣದ ಎಮಿಗ್ರೇಶನ್ ಗೇಟುಗಳ ಮೂಲಕ ಹಾದು ಹೋಗುವುದಕ್ಕಷ್ಟೇ ಬಳಸಲು ಸೀಮಿತಗೊಳಿಸದೆ ಅವುಗಳ ಮೂಲಕ ಆರೋಗ್ಯ ಸೇವಾ ಸೌಲಭ್ಯಗಳನ್ನೂ ಪಡೆಯಬಹುದಾಗಿದೆ.
ನಾಗರಿಕರು ತಮ್ಮ ಎಮಿರೇಟ್ಸ್ ಐಡಿ ಅನ್ನು ಉಪಯೋಗಿಸಿ ಆರೋಗ್ಯ ತಪಾಸಣೆಗಾಗಿ ಅಥವಾ ಫಾರ್ಮಸಿಯೊಂದರಲ್ಲಿ ಔಷಧಿಗಳನ್ನೂ ಖರೀದಿಸಬಹುದಾಗಿದೆ ಎಂದು ಯುಎಇಯ ಅತಿ ದೊಡ್ಡ ವಿಮಾ ಕಂಪೆನಿಗಳಲ್ಲೊಂದಾಗಿರುವ ಓಮನ್ ಇನ್ಶೂರೆನ್ಸ್ ಕಂಪೆನಿ ಹೇಳಿದೆ.
ವೈದ್ಯರ ಕನ್ಸಲ್ಟೇಶನ್ ಗಾಗಿ, ತಪಾಸಣೆ ಹಾಗೂ ಚಿಕಿತ್ಸೆಗಾಗಿ ಈ ಹಿಂದೆ ರೋಗಿಗಳು ತಮ್ಮ ನಿಯಮಿತ ವಿಮಾ ಕಾರ್ಡನ್ನು ಕ್ಲಿನಿಕ್ಕುಗಳು ಹಾಗೂ ಆಸ್ಪತ್ರೆಗಳಲ್ಲಿ ಹಾಜರುಪಡಿಸಬೇಕಾಗಿತ್ತು. ಆದರೆ ಈ ವರ್ಷದ ಫೆಬ್ರವರಿ 12ರಿಂದ ಸಾಂಪ್ರದಾಯಿಕ ಅರ್ಹತಾ ಪ್ರಕ್ರಿಯೆಯನ್ನು ಬದಿಗಿರಿಸಿ ಸ್ಮಾರ್ಟ್ ಸೇವೆಗಳನ್ನು ಒದಗಿಸುವ ಸರಕಾರದ ಪ್ರಯತ್ನಗಳಿಗೆ ಬೆಂಬಲಾರ್ಥವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪೆನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಕಂಪೆನಿಯಿಂದ ವಿಮಾ ಪಾಲಿಸಿ ಖರೀದಿಸಿದವರು ತಮ್ಮ ವಿಮಾ ಕಾರ್ಡಿನ ಬದಲು ತಮ್ಮ ಎಮಿರೇಟ್ಸ್ ಐಡಿ ತೋರಿಸಿ ನೇರ ಬಿಲ್ಲಿಂಗ್ ವೈದ್ಯಕೀಯ ಸೇವೆಯನ್ನು ಪಡೆಯಬಹುದು ಎಂದೂ ಕಂಪೆನಿ ತಿಳಿಸಿದೆ. ಹೆಚ್ಚೆಚ್ಚು ಯುಎಇ ನಾಗರಿಕರು ಈ ಸೌಲಭ್ಯವನ್ನು ಪಡೆಯುವ ಸಾಧ್ಯತೆಯಿದೆ.
ದಾಮನ್ ನ ನ್ಯಾಶನಲ್ ಹೆಲ್ತ್ ಇನ್ಶೂರೆನ್ಸ್ ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯಂತೆ ಅವರ ಕಂಪೆನಿ ಕೂಡ ಇಂತಹ ಸೇವೆಯನ್ನು ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದು ಈ ಬಗ್ಗೆ ಅಗತ್ಯ ಪರಿಶೀಲನೆಗಳು ನಡೆಯುತ್ತಿವೆ. ಇದರಿಂದ ಗ್ರಾಹಕರಿಗೆ ಅತೀ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಅದು ಹೇಳಿದೆ.
ನಮ್ಮ ಸದಸ್ಯರಿಗೆ 2017ರ ಆರಂಭದಲ್ಲಿ ಈ ಸೌಲಭ್ಯ ಒದಗಿಸಲಾಗುವುದು ಎಂದು ನಾವು ಈಗಾಗಲೇ ಹೇಳಿದ್ದೇವೆ. ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲಿಯೇ ಬಿಡುಗಡೆಗೊಳಿಸಲಿದ್ದೇವೆ,’’ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಮೈಖೇಲ್ ಬಿಟ್ಝರ್ ಹೇಳಿದ್ದಾರೆ.
ಸುರಕ್ಷಿತ ಆನ್ ಲೈನ್ ಪ್ಲಾಟ್ ಫಾರ್ಮ್ ಮೂಲಕ ಒಂದು ಕಾರ್ಡಿನ ಮೂಲಕ ಆರೋಗ್ಯ ಸೇವೆಗಳನ್ನು ದೇಶದಾದ್ಯಂತ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
‘‘ದೇಶದಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳು ಹಾಗೂ ಕ್ಲಿನಿಕ್ಕುಗಳಿಗೆ ಈ ಆಧುನಿಕ ವ್ಯವಸ್ಥೆಯ ಉಪಯೋಗದ ಹಾಗೂ ಬಳಕೆಯ ಕುರಿತು ಮಾಹಿತಿ ನೀಡಲಾಗಿದೆ. ಜನರು ಕೇವಲ ಒಂದು ಕಾರ್ಡ್ ಬಳಸಿ ಸೌಲಭ್ಯಗಳನ್ನು ಪಡೆಯಬಹುದು’’ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಮಿರೇಟ್ಸ್ ಐಡಿ ಮೂಲಕವೇ ಹಲವು ಸೇವಾ ಸೌಲಭ್ಯಗಳಾದ ಎಮಿಗ್ರೇಶನ್, ಎಟಿಎಂ ಹಾಗೂ ಇಲೆಕ್ಟ್ರಾನಿಕ್ ಹಣ ಪಾವತಿ ಮುಂತಾದವುಗಳನ್ನು ನಾಗರಿಕರಿಗೆ ಒದಗಿಸಬೇಕೆಂಬ ದೃಷ್ಟಿಯಿಂದ ಯುಎಇ ಸರಕಾರ 2014ರಿಂದಲೇ ಕಾರ್ಯನಿರತವಾಗಿದೆ. ದುಬೈ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕನಿಷ್ಠ 127 ಸ್ಮಾರ್ಟ್ ಗೇಟುಗಳನ್ನು ತೆರೆಯಲಾಗಿದ್ದು ಇವುಗಳ ಮುಖಾಂತರ ಎಮಿಗ್ರೇಶನ್ ಕೌಂಟರುಗಳಲ್ಲಿರುವ ಉದ್ದನೆಯ ಸರತಿ ಸಾಲನ್ನು ಯುಎಇ ನಾಗರಿಕರು ತಪ್ಪಿಸಬಹುದಾಗಿದೆ.
ನವೆಂಬರ್ 2016ರ ತನಕ 2,34,000ಕ್ಕೂ ಹೆಚ್ಚು ನಾಗರಿಕರು ತಮ್ಮ ಎಮಿರೇಟ್ಸ್ ಐಡಿ ಉಪಯೋಗಿಸಿ ಎಮಿಗ್ರೇಶನ್ ಗೇಟುಗಳ ಮೂಲಕ ಹಾದು ಹೋಗಿದ್ದಾರೆ.







