ಪ್ರಸಕ್ತ ಮೇಯರ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಶೂನ್ಯ: ಬಿಜೆಪಿ

ಮಂಗಳೂರು, ಮಾ.7: ಕಳೆದ ಒಂದು ವರ್ಷದ ಅಧಿಕಾರಾವಧಿಯಲ್ಲಿ ಪುರಭವನದ ಭೋಜನ ಶಾಲೆಯ ತ್ವರಿತಗತಿಯ ಕಾಮಗಾರಿಯನ್ನು ಹೊರತುಪಡಿಸಿದರೆ, ಪ್ರಸಕ್ತ ಮೇಯರ್‌ರವರು ಮಂಗಳೂರು ಮಹಾನಗರ ಪಾಲಿಕೆಯ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆ ಶೂನ್ಯ ಎಂದು ವಿಪಕ್ಷ ಬಿಜೆಪಿ ಆಕ್ಷೇಪಿಸಿದೆ.
ಮನಪಾದ ವಿಪಕ್ಷ ಅಧ್ಯಕ್ಷೆ ರೂಪಾ ಡಿ. ಬಂಗೇರಾ ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಈ ಆರೋಪ ಮಾಡಿದರು.
ಪಾಲಿಕೆಯ ಹಿರಿಯ ಸದಸ್ಯರಾದ ಹರಿನಾಥ್‌ರವರಿಗೆ ಮೇಯರ್ ಹುದ್ದೆ ದೊರೆತಾಗ ಮಂಗಳೂರಿನ ಜನತೆಗೆ ಭಾರೀ ನಿರೀಕ್ಷೆ ಇತ್ತು. ತಮ್ಮ ಅನುಭವದಿಂದ ಮಂಗಳೂರಿನ ಅಭಿವೃದ್ಧಿಗೆ ವೇಗ ನೀಡುತ್ತಾರೆ ಎಂಬ ಆಶಯವಿತ್ತು. ಆದರೆ ಅವರು ತಮ್ಮ ಒಂದು ವರ್ಷದ ಆಡಳಿತಾವಧಿಯಲ್ಲಿ ನಗರದ ಜನತೆಗೆ ಯಾವುದೇ ದೊಡ್ಡ ಕೊಡುಗೆಯನ್ನು ನೀಡಿಲ್ಲ ಎಂದರು.
ಪುರಭವನದ ಭೋಜನ ಶಾಲೆಯನ್ನು ತ್ವರಿತಗತಿಯಲ್ಲಿ ಮಾಡಲಾಯಿತಾದರೂ ನಗರದಲ್ಲಿ ಪುರಭವನಕ್ಕೆ ಪರ್ಯಾಯವಾಗಿ ರಂಗಕಲಾವಿದರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲು ಮಾತ್ರ ಹೊಸ ಕಟ್ಟಡದಿಂದಲೂ ಸಾಧ್ಯವಾಗಿಲ್ಲ. ಅಧಿಕಾರವೇರುತ್ತಲೇ ಮೇ ತಿಂಗಳವರೆಗೆ ಜನರಿಗೆ ನೀರಿನ ತೊಂದರೆ ಆಗುವುದಿಲ್ಲ ಎಂದು ಘೋಷಿಸಿದ್ದರೂ, 15 ದಿನಗಳಲ್ಲೇ ಜನರು ನೀರಿನ ಬವಣೆ ಎದುರಿಸುವಂತಾಯಿತು. ಪ್ಲಾಸ್ಟಿಕ್ ಮುಕ್ತ ಮಂಗಳೂರು ಘೋಷಣೆಯಾಗಿ ಕೆಲ ಬಟ್ಟೆ ಚೀಲಗಳನ್ನು ವಿತರಿಸುವುದನ್ನು ಬಿಟ್ಟರೆ, ಅದಕ್ಕೆ ಪೂರಕವಾದ ಯೋಜನೆಗಳನ್ನು ಪಾಲಿಕೆ ಬಜೆಟ್‌ನಲ್ಲಿ ಅಗತ್ಯ ಅನುದಾನಕ್ಕೆ ಮೀಸಲಿಟ್ಟಿಲ್ಲ. ಆಡಳಿತ ವೈಫಲ್ಯದಿಂದಾಗಿ ಮುಖ್ಯಮಂತ್ರಿಯ ನಾಲ್ಕನೆ ಹಂತದ ವಿಶೇಷ ನಿಧಿ ಈ ಬಾರಿ ದೊರೆಯುವುದು ಅಸಾಧ್ಯವಾಗಿದೆ. ಕಸದ ಬುಟ್ಟಿ ನೀಡುವುದಾಗಿ ಹೇಳಿ ಅದನ್ನೂ ಸೂಕ್ತವಾಗಿ ವಿತರಿಸುವ ಕೆಲಸ ಮಾಡಿಲ್ಲ.ಫ್ಲೆಕ್ಸ್ ಮುಕ್ತ ನಗರವೆಂಬ ಘೋಷಣೆ ಕನಸಾಗಿಯೇ ಉಳಿದಿದೆ ಎಂದು ಅವರು ದೂರಿದರು.
ಕೇಂದ್ರ ಸರಕಾರದ ಅಮೃತ್ ಯೋಜನೆಯ ಹಣವನ್ನು ಕಳಪೆ ಕಾಮಗಾರಿಗಳ ದುರಸ್ತಿ ಬಳಕೆಯ ವಿರುದ್ಧ ಸರಕಾರಕ್ಕೆ ವರದಿ ಸಲ್ಲಿಸಲು ಸರಕಾರದ ಅಧೀನ ಕಾರ್ಯದರ್ಶಿಗಳಿಂದ ನಿರ್ದೇಶನ, ಪಾಲಿಕೆ ಅನುದಾನ ಹಂಚಿಕೆಯಲ್ಲಿ ಶಾಸಕರ ಕೈವಾಡ,ಮೊದಲಾದ ತಪ್ಪುನಡೆಗಳಿಂದ ಪಾಲಿಕೆ ಆಡಳಿತ ತೀವ್ರ ಮುಜಗರವನ್ನು ಪಡುವಂತಾಯಿತು ಎಂದು ರೂಪಾ ಡಿ. ಬಂಗೇರ ಹೇಳಿದರು.
ಮಂಗಳೂರಿಗೆ ಸರಬರಾಜಾಗುವ ಕುಡಿಯುವ ನೀರಿನ ಮಲಕ್ಕೆ ತ್ಯಾಜ್ಯ ನೀರು, ಕುರಿ, ಕೋಳಿ ಮಾಂಸ ತ್ಯಾಜ್ಯ ಸೇರುತ್ತಿರುವ ಬಗ್ಗೆ ದಾಖಲೆ ಸಹಿತ ತಿಳಿಸಿದರೂ ಯಾವುದೇ ಕ್ರಮವಾಗಿಲ್ಲ. ಸರ್ಕ್ಯೂಟ್‌ಹೌಸ್‌ನಿಂದ ಕದ್ರಿ ಉದ್ಯಾನವನದ ಮೂಲಕ ಹಾದು ಹೋಗುವ ವಿವೇಕಾನಂದ ರಸ್ತೆಗೆ ಅಧಿಕೃತ ದಾಖಲೆಗಳಿದ್ದರೂ ಹೊಸ ನಾಮಫಲಕ ಅಳವಡಿಸಿರುವುದನ್ನು ಕಿತ್ತೆಸೆದು ಮೇಯರ್ ತಮ್ಮ ಸ್ಥಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಇದು ಅವರು ಮಾಡಿರುವ ಬಹುದೊಡ್ಡ ಸಾಧನೆ ಎಂದು ರೂಪಾ ಬಂಗೇರಾ ವ್ಯಂಗ್ಯವಾಡಿದರು.
ಸಾಮಾನ್ಯ ಸಭೆಯಲ್ಲಿ ಆಡಳಿತದ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದ ಪ್ರತಿಪಕ್ಷದ ನಾಯಕಿ ಬಗ್ಗೆ ಮೇಯರ್ ಸ್ಥಾನದಲ್ಲಿದ್ದು ಅವರು ಅಗೌರವ ತೋರಿಸಿರುವ ಬಗ್ಗೆ ತಮಗೆ ನೋವಾಗಿದೆ ಎಂದು ಬೇಸರಿಸಿದರು.
ಗೋಷ್ಠಿಯಲ್ಲಿ ಮನಪಾದ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ಗಣೇಶ್ ಹೊಸಬೆಟ್ಟು, ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.







