ದುರ್ನಡತೆಗಾಗಿ ಆಟಗಾರನನ್ನು 'ಔಟ್' ಮಾಡಬಹುದು ಅಂಪೈರ್ !
ಕ್ರಿಕೆಟ್ ನಲ್ಲಿ ಏನೇನು ಹೊಸ ನಿಯಮಗಳು ಜಾರಿಗೆ ಬರುತ್ತಿವೆ ನೋಡಿ

ಮೆಲ್ಬೋರ್ನ್, ಮಾ.7:ಕ್ರೀಡಾಂಗಣದಲ್ಲಿ ಆಟಗಾರರು ಅನುಚಿತವಾಗಿ ವರ್ತಿಸಿದರೆ ಅಂತಹ ಆಟಗಾರರನ್ನು ಕ್ರೀಡಾಂಗಣದಿಂದ ಹೊರದಬ್ಬುವ ಸ್ವಾತಂತ್ರ್ಯವನ್ನು ಅಂಪೈರ್ ಗೆ ನೀಡಲಾಗಿದೆ.
ಅಕ್ಟೋಬರ್ 1ರಂದು ಕ್ರಿಕೆಟ್ ನ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಎಂಸಿಸಿ ತಿಳಿಸಿದೆ.
ಆಟಗಾರರು ಹಿಡಿಯುವ ಬ್ಯಾಟ್ ಗೂ ನಿಯಮ ಜಾರಿಯಾಗಿದೆ. ಇನ್ನು ಮುಂದೆ ಬ್ಯಾಟ್ಸ್ ಮನ್ ಗಳು ತಮಗೆ ಇಷ್ಟವಾದ ಬ್ಯಾಟ್ ನ್ನು ತಯಾರಿಸಿ ಉಪಯೋಗಿಸುವಂತಿಲ್ಲ. ಆಟಗಾರರು ಹಿಡಿಯುವ ಬ್ಯಾಟ್ 108 ಮಿ.ಮೀ. ಅಗಲ 67 ಮಿ.ಮೀ ಆಳ ಮತ್ತು 40 ಮಿ.ಮಿ ಅಂಚು ಹೊಂದಿರಬೇಕು. ಈ ನಿಯಮ ಪಾಲಿಸದ ಬ್ಯಾಟ್ ನ್ನು ಆಟಗಾರರು ಉಪಯೋಗಿಸುವಂತಿಲ್ಲ.
ಬ್ಯಾಟ್ ಮತ್ತು ಬಾಲ್ ನಡುವೆ ಅಸಮತೋಲನದ ಹಿನ್ನೆಲೆಯಲ್ಲಿ ಆಟಗಾರರು, ಬ್ಯಾಟ್ ತಯಾರಕರು ಮತ್ತು ವಿಶ್ವದ ನಾನಾ ಕ್ರಿಕೆಟ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಹೊಸ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಬ್ಯಾಟ್ ನ ಗಾತ್ರ ದೊಡ್ಡದಾಗಿದೆ. ಬ್ಯಾಟ್ಸ್ ಮನ್ ಗಳು ತಮಗೆ ಇಷ್ಟವಾದ ಬ್ಯಾಟ್ ಗಳನ್ನು ಬಳಸುವುದು ಜಾಗತಿಕ ಕ್ರಿಕೆಟ್ ನಲ್ಲಿ ಒಂದು ಸಮಸ್ಯೆಯಾಗಿದೆ ಎಂದು ಎಂಸಿಸಿ ಧುರೀಣ ಸ್ಟೀಫನ್ಸನ್ ತಿಳಿಸಿದ್ದಾರೆ.
ಏಕರೂಪದ ಬ್ಯಾಟ್ ಗಳ ಬಳಕೆ ನಿಯಮ ಜಾರಿಯಾಗುವುದರ ಜೊತೆಗೆ ಆಟದಲ್ಲಿ ಶಿಸ್ತನ್ನು ಮೂಡಿಸುವ ಉದ್ದೇಶಕ್ಕಾಗಿ ಇನ್ನೊಂದು ನಿಯಮವನ್ನು ರೂಪಿಸಲಾಗಿದೆ. ಕ್ರೀಡಾಂಗಣದಲ್ಲಿ ಅಂಪೈರ್ ಜೊತೆ ವಾಗ್ವಾದ ನಡೆಸುವ ಅಥವಾ ಕೆಟ್ಟ ರೀತಿಯಲ್ಲಿ ನಡೆದುಕೊಳ್ಳುವ ಆಟಗಾರನನ್ನು ಔಟೆಂದು ತೀರ್ಪು ನೀಡಿ ಅವರನ್ನು ಕ್ರೀಡಾಂಗಣದಿಂದ ಹೊರದಬ್ಬುವ ಅಧಿಕಾರವನ್ನು ಅಂಪೈರ್ ಗೆ ನೀಡಲಾಗಿದೆ.
ಎದುರಾಳಿ ತಂಡದ ಆಟಗಾರನ ಮೇಲೆ ಚೆಂಡು ಎಸೆತ, ಹಲ್ಲೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಆಟಗಾರನಿರುವ ತಂಡ ಎದುರಾಳಿ ತಂಡಕ್ಕೆ 5 ಪೆನಾಲ್ಟಿ ರನ್ ಬಿಟ್ಟುಕೊಡಬೇಕಾಗುತ್ತದೆ.
ಎದುರಾಳಿ ಆಟಗಾರನ ಮೇಲೆ , ತಂಡದ ಅಧಿಕಾರಿ ಅಥವಾ ಪ್ರೇಕ್ಷಕನ ಮೇಲೆ ಹಲ್ಲೆ ನಡೆಸಿದ ಆಟಗಾರನನ್ನು ಕ್ರೀಡಾಂಗಣದಿಂದ ನಿಗದಿತ ಓವರ್ ಗಳು ಪೂರ್ಣಗೊಳ್ಳುವ ತನಕ ಹೊರದಬ್ಬಲಾಗುವುದು. 5 ಪೆನಾಲ್ಟಿ ರನ್ ಕಡಿತ ಮಾಡಲಾಗುವುದು.
ಹೊಸ ನಿಯಮ ಪ್ರಕಾರ ಬೌನ್ಸಿಂಗ್ ಬ್ಯಾಟ್ ರನೌಟ್ ನ್ನು ರದ್ದುಪಡಿಸಲಾಗಿದೆ. ಬ್ಯಾಟ್ಸ್ ಮನ್ ರನ್ ಗಳಿಸುವ ಯತ್ನದಲ್ಲಿ ಕ್ರೀಸ್ ತಲುಪಿ ಬ್ಯಾಟ್ ನ್ನು ಒಮ್ಮೆ ಕ್ರೀಸ್ ಸ್ಪರ್ಶಿಸಿದರೆ ಮತ್ತೆ ಬ್ಯಾಟ್ಸ್ ಮನ್ ಬ್ಯಾಟ್ ನ್ನು ಎತ್ತಿದರೂ ಆತನನ್ನು ರನೌಟ್ ಮಾಡಲು ಸಾಧ್ಯವಿಲ್ಲ.







