ಫೈಝಲ್ ಕುಟುಂಬಕ್ಕೆ ಧನಸಹಾಯ ಪರಿಗಣನೆಯಲ್ಲಿಲ್ಲ: ಪಿಣರಾಯಿ ವಿಜಯನ್

ತಿರುವನಂತಪುರಂ,ಮಾ.7: ಮಲಪ್ಪುರಂ ಜಿಲ್ಲೆಯ ಕೊಡಿಂಞಿಯಲ್ಲಿ ಮತಾಂತರವಾದ ಕಾರಣಕ್ಕೆ ಆರೆಸ್ಸೆಸ್ ಕಾರ್ಯಕರ್ತರು ಕೊಲೆ ಮಾಡಿದ ಫೈಝಲ್‌ರ ಕುಟುಂಬಕ್ಕೆ ಧನಸಹಾಯ ನೀಡುವ ವಿಷಯ ಸರಕಾರದ ಪರಿಗಣನೆಯಲ್ಲಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಗೆತಿಳಿಸಿದ್ದಾರೆ.
ಶಾಸಕ ಪಿ.ಕೆ. ಅಬ್ದುರ್ರಬ್ ವಿಷಯವನ್ನು ವಿಧಾನಸಭೆಯಲ್ಲಿ ಎತ್ತಿದ್ದರು. ಫೈಝಲ್‌ರ ವಿಧವೆ ಪತ್ನಿಗೆ ಸರಕಾರ ಕೆಲಸ ಕೊಡಬೇಕೆನ್ನುವ ಬೇಡಿಕೆ ಕೂಡಾ ಸರಕಾರದ ಪರಿಗಣನೆಯಲ್ಲಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಫೈಝಲ್‌ರನ್ನು ಕೊಂದಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ 16 ಮಂದಿಯನ್ನು ಕೋರ್ಟಿಗೆ ಹಾಜರು ಪಡಿಸಿ ರಿಮಾಂಡ್ ವಿಧಿಸಲಾಗಿದೆ. ತನಿಖೆಯನ್ನು ಮಲಪ್ಪುರಂ ಕ್ರೈಂಬ್ರಾಂಚ್ ಡಿವೈಎಸ್ಪಿ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕೇರಳ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಫೈಝಲ್ ಕೊಲೆಗೆ ಸಂಬಂಧಿಸಿ ಸಂಚು ನಡೆದ ನನ್ನಂಬ್ರದ ವಿದ್ಯಾನಿಕೇತನ್ , ತಿರೂರಿನ ಆರೆಸ್ಸೆಸ್ ಕಚೇರಿ, ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಬಿಜೆಪಿ ಕಚೇರಿಗೆ ಸಂಬಂಧಿಸಿದ ವಿಷಯಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.ಪ್ರಕರಣಕ್ಕೆ ವಿಶೇಷ ಅಭಿಯೋಜಕರ(ವ್ಯಾಜ್ಯದಾರ)ನ್ನು ನೇಮಿಸಬೇಕೆಂದು ಅಬ್ದುರ್ರಬ್ ವಿನಂತಿಸಿದ್ದಾರೆಂದು ವರದಿ ತಿಳಿಸಿದೆ.