ಬಡವರ ಹೊಟ್ಟೆಗೆ ಹೊಡೆಯುತ್ತಿರುವ ಮೋದಿ ಸರಕಾರ: ಅಭಯಚಂದ್ರ ಜೈನ್
ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಮೂಡುಬಿದಿರೆ ಕಾಂಗ್ರೆಸ್ ಪ್ರತಿಭಟನೆ

ಮೂಡುಬಿದಿರೆ, ಮಾ.7: ಜನವಿರೋಧಿ ನೀತಿಯ ಮೂಲಕ ಕೇಂದ್ರ ಸರಕಾರ ಬಡವರ ಹೊಟ್ಟೆಗೆ ಹೊಡೆಯುತ್ತಿದೆ. ಹಲವು ಆಶ್ವಾಸನೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಭ್ರಷ್ಟಾಚಾರಿಗಳ, ಕಾಳದಂಧೆಕೋರರ ಪರವಾಗಿದೆ. ಕೇಂದ್ರ ಸರಕಾರವು ಕಳೆದ ನಾಲ್ಕು ತಿಂಗಳಲ್ಲಿ ಹಲವು ಬಾರಿ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಸುವ ಮೂಲಕ ತನ್ನ ನಿಜಬಣ್ಣವನ್ನು ಪ್ರದರ್ಶಿಸುತ್ತಿದೆ. ಬಡವರ ಹಾಗೂ ಮಹಿಳೆಯರ ಮೇಲೆ ಶೋಷಣೆ ಮಾಡುತ್ತಿರುವ ಈ ಧೋರಣೆಯನ್ನು ಕಾಂಗ್ರೆಸ್ ಖಂಡಿಸುತ್ತದೆಎಂದು ಶಾಸಕ ಅಭಯಚಂದ್ರ ಹೇಳಿದರು.
ಅವರು ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಮಂಗಳವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು.
ಮೂಡುಬಿದಿರೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ಸು ನಿಲ್ದಾಣವಾಗಿ ಮೂಡುಬಿದಿರೆ ವಿಶೇಷ ತಹಸೀಲ್ದಾರ್ ಕಚೇರಿಯ ಪ್ರಾಂಗಣದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭ ಕಾರ್ಯಕರ್ತರು ಬ್ಯಾನರ್ ಬಟಿಂಗ್‌ಗಳನ್ನು ಹಿಡಿದುಕೊಂಡು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಧಿಕ್ಕಾರಗಳನ್ನು ಕೂಗಿದರು. ಪ್ರತಿಭಟನೆಯ ಸಮಾಪನ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುರಕಲ್ಲಿನ ಒಲೆ ಹಾಕಿ ತಮ್ಮ ಜೊತೆ ತಂದಿದ್ದ ಕಟ್ಟಿಗೆಯನ್ನು ಬಳಸಿ ಪಾತ್ರೆ ಇಟ್ಟು ಉರಿಸಿದರು. ಗ್ಯಾಸ್ ಬೆಲೆಯೇರಿಕೆಯನ್ನು ವಿರೋಧಿಸಿ ನಿದರ್ಶನಾತ್ಮಕವಾಗಿ ಈ ಪ್ರತಿಭಟನೆ ನಡೆಸಲಾಯಿತು. ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಶಾಸಕ ಅಭಯಚಂದ್ರ ಮಾತನಾಡಿದರು. ಜಿಲ್ಲಾಧಿಕಾರಿಗಳಿಗೆ ತಲುಪಿಸುವ ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಮೊಹಮ್ಮದ್ ಇಸಾಕ್ ಅವರಿಗೆ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಮಹಿಳಾ ಘಟಕದ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಕಾಂಗ್ರೆಸ್ ಮುಖಂಡರಾದ ರತ್ನಾಕರ ಸಿ. ಮೊಯಿಲಿ, ಚಂದ್ರಹಾಸ ಸನಿಲ್, ಸುರೇಶ್ ಕೋಟ್ಯಾನ್, ರುಕ್ಕಯ ಪೂಜಾರಿ, ಪ್ರೇಮನಾಥ ಮಾರ್ಲ, ಕೊರಗಪ್ಪ, ರತ್ನಾಕರ ದೇವಾಡಿಗ, ಇ.ಕೆ.ಥೋಮಸ್, ವಾಸು ಪೂಜಾರಿ ಮತ್ತಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







