ಭಟ್ಕಳ: ರಸ್ತೆ ಅಪಘಾತ, ಮಹಿಳೆ ಸಾವು

ಭಟ್ಕಳ, ಮಾ.7: ಎರಡು ಬೈಕ್ ಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಇಬ್ಬರು ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆ ಸೇರಿದ ಘಟನೆ ಮಂಗಳವಾರ ಇಲ್ಲಿನ ಬಂದರ್ ರಸ್ತೆಯ 3ನೆ ಕ್ರಾಸ್ ಬಳಿ ನಡೆದಿದೆ. ಮೃತ ಮಹಿಳೆಯನ್ನು ಬಂದರ್ ರೋಡ್ ನಿವಾಸಿ ರಿಹಾನಾ ಅಶ್ಫಾಖ್ ದಾಮ್ದಾ(48) ಎಂದು ಗುರುತಿಸಲಾಗಿದೆ.
ಇವರು ತಮ್ಮ ಪತಿ ಅಶ್ಫಾಖ್ ದಾಮ್ದಾರೊಂದಿಗೆ ಬೈಕ್‌ನಲ್ಲಿ ಬಂದರ್ ರೋಡ್ ಮೂರನೆ ಕ್ರಾಸ್ ದಾಟಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಎದುರಿನಿಂದ ಅತ್ಯಂತ ವೇಗವಾಗಿ ಬಂದ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತ್ತಿದ್ದ ರಿಹಾನಾ ಬೈಕ್ ನಿಂದ ಜಿಗಿದು ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಆಕೆಯ ತಲೆ ಬಡಿಯಿತು. ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಪತಿ ಅಶ್ಫಾಖ್ ದಾಮ್ದಾ(55) ಹಾಗೂ ಬೈಕ್ ಸವಾರ ದಿಗಂಬರ ಸದಾನಂದ ನಾಯ್ಕ(18) ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





