ಅನುಮಾನಸ್ಪದವಾಗಿ ಜಾನುವರುಗಳ ಸಾವು

ಕೊಳ್ಳೇಗಾಲ, ಮಾ.7: ಹಿಂಡಿ, ಬೂಸಾ ತಿನ್ನುತ್ತಿದ್ದಂತೆ ಅನುಮಾನಸ್ಪದ ರೀತಿಯಲ್ಲಿ 2 ಲಕ್ಷ ರೂ. ಬೆಲೆ ಬಾಳುವ 4 ಹಸುಗಳು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮಧುವನಹಳ್ಳಿ ಗ್ರಾಮದ ನಿವಾಸಿ ಕೆಂಪಮ್ಮ ಅವರ ಪುತ್ರರಾದ ರಾಜು ಮತ್ತು ಗಣೇಶ್ ಅವರಿಗೆ ಸೇರಿದ 4 ಇಲಾಚಿ ಹಸುಗಳು ಮರಣಹೊಂದಿದ್ದು, ಇವುಗಳು ನಿತ್ಯ 25 ಲೀಟರ್ ಹಾಲನ್ನು ನೀಡುತ್ತಿದ್ದವು ಎನ್ನಲಾಗಿದೆ.
ಗ್ರಾಮದ ಬಳಿಯ ಲೊಕ್ಕನಹಳ್ಳಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 2 ಜಮೀನಿನಲ್ಲಿ ಹಸುಗಳಿಗೆ ಕೊಟ್ಟಿಗೆ ನಿರ್ಮಿಸಿದ್ದು, ನಿತ್ಯ ಅಲ್ಲಿಯೇ ಹಸುಗಳನ್ನು ಸಾಕಲಾಗುತ್ತಿತ್ತು. ಬೆಳಗ್ಗೆ ಹಾಲು ಕರೆಯುವ ಮುನ್ನ 4 ಹಸುಗಳಿಗೂ ಹಾಲಿನ ಡೇರಿಯಿಂದ ಪೂರೈಸಲಾಗಿದ್ದ ಹಿಂಡಿ, ಬೂಸಾ(ಫೀಡ್ಸ್) ನೀಡಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ಹಸುಗಳು ಒದ್ದಾಡಿಕೊಂಡು ಅಸುನೀಗಿವೆ.
ಗಾಬರಿಗೊಂಡ ಪಶು ಪಾಲಕ ಗಣೇಶ್, ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ಕೊಡಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಸಾವಿಗೀಡಾದ 4 ಹಸುಗಳನ್ನು ಸ್ಥಳದಲ್ಲಿಯೇ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟರಾಮು ಅವರಿಂದ ಪಚನಾಮೆ ನಡೆಸಿ, ಜಮೀನಿನಲ್ಲಿಯೇ ಹೂಳಲಾಯಿತು.
ಶಾಸಕರ ಭೇಟಿ:
ಘಟನೆ ತಿಳಿದು ತಹಶೀಲ್ದಾರ್ ಕಾಮಾಕ್ಷಮ್ಮ, ತಾಪಂ ಅಧ್ಯಕ್ಷ ಆರ್.ರಾಜು, ಇಓ ಡಾ.ದರ್ಶನ್, ಪಶು ಸಂಗೋಪನೆ ಇಲಾಖೆ ಡಿಡಿ ಬಾಲಸುಂದರ್ ಅವರೊಂದಿಗೆ ಸ್ಥಳಕ್ಕಾಗಮಿಸಿದ ಹನೂರು ಶಾಸಕ ಆರ್.ನರೇಂದ್ರ ಅವರು, ಹಸುಗಳ ಸಾವಿಗೆ ಕಾರಣವೇನು ಎಂಬುದನ್ನು ಕೂಡಲೇ ಪತ್ತೆ ಹಚ್ಚುವಂತೆ ಸೂಚಿಸಿದರಲ್ಲದೇ, ಪಶುಭಾಗ್ಯ ಯೋಜನೆಯಡಿ ನಷ್ಟಕ್ಕೊಳಗಾಗಿರುವ ಕುಟುಂಬದವರಿಗೆ 2 ಹಸುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಕಟ್ಟುನಿಟ್ಟಿನ ಆದೇಶ ಮಾಡಿದರು.







