ಬರಗಾಲದ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ ಚಿಂತನೆ: ಪಿಣರಾಯಿ ವಿಜಯನ್

ಕಾಸರಗೋಡು, ಮಾ.7: ರಾಜ್ಯದಲ್ಲಿ ಹಿಂದೆಂದೂ ಕಾಣದ ಬರಗಾಲದ ಹಿನ್ನಲೆಯಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆಗೆ ರಾಜ್ಯ ಸರಕಾರ ಚಿಂತನೆ ನಡೆಸಿದೆ. ಈ ಕುರಿತು ಪರಿಶೀಲನೆ ನಡೆಸಿ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇರಳ ಮುಖಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
ಈಗಾಗಲೇ ತೀವ್ರ ಜಲಕ್ಷಾಮ ತಲೆದೋರಿದೆ. ಹಲವು ಕಡೆ ಕುಡಿಯುವ ನೀರಿಗೂ ಜನತೆ ಸಮಸ್ಯೆಗೆ ತುತ್ತಾಗಿದ್ದಾರೆ. ನದಿ, ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದ ನೀರಿನ ಲಭ್ಯತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ.ಮಳೆಯ ಮೋಡವನ್ನು ಗಮನಿಸಿ ಮೋಡ ಬಿತ್ತನೆ ಮೂಲಕ ಕೃತಕ ಮಳೆಗೆ ಎಲ್ಲಾ ಸಿದ್ಧತೆ ಮಾಡಲಾಗುವುದು.ಜೊತೆಗೆ ನೀರು ಸಂಗ್ರಹ ಕ್ಕೆ ಅಗತ್ಯವಾದ ಕ್ರಮ, ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಈ ವರ್ಷ ಹಲವು ದಶಕಗಳ ಬಳಿಕ ರಾಜ್ಯವು ಬರಗಾಲ ಎದುರಿಸುತ್ತಿದ್ದು, ರಾಜ್ಯದ ಎಲ್ಲಾ ೧೪ ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಬರಗಾಲ ಎದುರಿಸಲು ಸರಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು