ಉಳ್ಳಾಲ: ಸಫ್ವಾನ್ ಮತ್ತು ರಾಜು ಕೋಟ್ಯಾನ್ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ
ಉಳ್ಳಾಲ, ಮಾ.7: ಉಳ್ಳಾಲ ನಗರ ವ್ಯಾಪ್ತಿಯ ಅರ್ಹ ಪಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ಸುಮಾರು ಮೂರು ಕೋಟಿ ಎಪ್ಪತ್ತೊಂದು ಲಕ್ಷದ ಮೂವತ್ತು ಸಾವಿರ ರೂ. ಮೊತ್ತದ ಚೆಕ್ಕನ್ನು ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಚ್.ಸಿ ಮಹದೇವಪ್ಪ ಅವರು ಮಂಗಳವಾರ ವಿತರಿಸಿದರು.
ಬಳಿಕ ಮಾತನಾಡಿದ ಸಚಿವ ಎಚ್.ಸಿ ಮಹಾದೇವಪ್ಪ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ನಾಲ್ಕು ವರುಷಗಳನ್ನು ಪೂರ್ಣಗೊಳಿಸುತ್ತಿದ್ದು, 2018ರಲ್ಲಿ ಮತ್ತೆ ನಾವು ಸರಕಾರ ರಚಿಸಲಿದ್ದೇವೆ. ಉಳ್ಳಾಲ ಮುಖ್ಯ ರಸ್ತೆ ಅಭಿವೃದ್ಧಿಗೆ ಮತ್ತೆ 5ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು ಒಂದು ವರುಷದಲ್ಲಿ ಎಲ್ಲಾ ಕಾಮಗಾರಿಗಳು ಸಂಪೂರ್ಣವಾಗಲಿದೆ ಎಂದರು.
ವಿರೋಧ ಪಕ್ಷಗಳು ಇಂದು ಸುಳ್ಳನ್ನು ಸತ್ಯವಾಗಿಸಲು ಹೊರಟಿದ್ದು ಆ ಮೂಲಕ ಸರಕಾರವನ್ನು ಅಸ್ಥಿರಗೊಳಿಸುವ ಅವರ ತಂತ್ರಗಾರಿಕೆಗಳು ಫಲಫ್ರದವಾಗಲು ಸಾಧ್ಯವಿಲ್ಲ.ಉಳ್ಳಾಲದಲ್ಲಿ ಸಚಿವ ಯು.ಟಿ ಖಾದರ್ ಅವರು ಜಾತ್ಯಾತೀತ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಹ ಅದನ್ನು ಸಹಿಸದ ಕೆಲ ದುಷ್ಟಶಕ್ತಿಗಳು ಮತೀಯ ಸಾಮರಸ್ಯವನ್ನು ಕದಡುವ ಮುಖೇನ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲು ಕಾರ್ಯೋನ್ಮುಖರಾಗಿದ್ದು ವಿಷಾದಕರ ಸಂಗತಿಯಾಗಿದೆ ಎಂದು ಹೇಳಿದರು.
ರಾಜು ಕೋಟ್ಯಾನ್, ಸಫ್ವಾನ್ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ:
ಕಳೆದ ವರುಷ ಎಪ್ರಿಲ್ ತಿಂಗಳಲ್ಲಿ ಉಳ್ಳಾಲದಲ್ಲಿ ನಡೆದಿದ್ದ ಕೋಮು ಹಿಂಸಾಚಾರದಲ್ಲಿ ದುಷ್ಕರ್ಮಿಗಳಿಂದ ದಾರುಣವಾಗಿ ಕೊಲೆಯಾಗಿದ್ದ ಮೊಗವೀರ ಪಟ್ಣ ನಿವಾಸಿ ರಾಜುಕೋಟ್ಯಾನ್ ಮತ್ತು ಚೆಂಬುಗುಡ್ಡೆ ಪಿಲಾರು ನಿವಾಸಿ ಸಫ್ವಾನ್ ಕುಟುಂಬಕ್ಕೆ ರಾಜ್ಯ ಸರಕಾರದಿಂದ ನೀಡಲಾದ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ಕನ್ನು ನಗರವ್ಯಾಪ್ತಿಯ ವಿವಿಧ ಸವಲತ್ತುಗಳ ಫಲಾನುಭವಿಗಳಿಗೆ ಚೆಕ್ ವಿತರಣೆಯ ಕಾರ್ಯಕ್ರಮದಲ್ಲಿ ರಾಜು ಕೋಟ್ಯಾನ್ ಪತ್ನಿ ಸವಿತಾ ಮತ್ತು ಸಫ್ವಾನ್ ತಾಯಿ ಸಾಯಿದಾ ಅವರಿಗೆ ತಲಾ 5 ಲಕ್ಷದ ಪರಿಹಾರ ಚೆಕ್ಕನ್ನು ಹಸ್ತಾಂತರಿಸಿದರು.
ಆಹಾರ ಸಚಿವ ಯು.ಟಿ.ಖಾದರ್ ಮಾತನಾಡಿ, ಧರ್ಮದ ಹೆಸರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕಚ್ಚಾಡಿ ಇಂದು ಅಮಾಯಕ ಯುವಕರು ಪ್ರಾಣ ಕಳಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.ಎಪ್ರಿಲ್ ತಿಂಗಳಲ್ಲಿ ನಡೆದ ಅಹಿತಕರ ಘಟನೆಯಲ್ಲಿ ರಾಜು ಕೋಟ್ಯಾನ್ ಮತ್ತು ಸಫ್ವಾನ್ ಅವರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳಕೊಂಡಿದ್ದು ಅತೀವ ಬೇಸರ ಮೂಡಿಸಿತ್ತು. ಅವರ ಮನೆಯವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಎರಡೂ ಕುಟುಂಬಕ್ಕೂ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ನಗರಸಭಾ ಅಧ್ಯಕ್ಷ ಹುಸೇನ್ ಕುಂಞಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಹಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಅಪರ ಜಿಲ್ಲಾಧಿಕಾರಿ ಕುಮಾರ್, ತಹಶೀಲ್ದಾರ್ ಮಹದೇವಪ್ಪ ಮೊದಲಾದವರು ಉಪಸ್ಥಿತರಿದ್ದರು.





.jpg.jpg)



