ಅಮಿತ್ ಶಾ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದ ಪಟೇಲ್ ಪ್ರತಿಭಟನಾಕಾರರು

ಅಹ್ಮದಾಬಾದ್,ಮಾ.7: ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಪಟೇಲ್ ಸಮುದಾಯದವರೆನ್ನಲಾದ ಜನರ ಗುಂಪೊಂದು ಸೋಮವಾರ ರಾತ್ರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ವಾಹನಗಳ ಸಾಲಿನ ಮೇಲೆ ಮೊಟ್ಟೆಗಳನ್ನು ಎಸೆದಿದೆ. ಮಂಗಳವಾರದಿಂದ ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಗುಜರಾಥ್ ಭೇಟಿಯನ್ನು ಆರಂಭಿಸಿದ್ದು, ಬುಧವಾರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಲೆಂದು ಶಾ ಅಲ್ಲಿಗೆ ತೆರಳುತ್ತಿದ್ದಾಗ ಮೊಟ್ಟೆಗಳ ತೂರಾಟ ನಡೆದಿದೆ.
ಪ್ರಭಾವಿ ಪಟೇಲ್ ಸಮುದಾಯದ ಕಾರ್ಯಕರ್ತರು ಬಿಜೆಪಿ ನಾಯಕರು ಮತ್ತು ಸಚಿವರ ಮೇಲೆ ಇಂತಹುದೇ ದಾಳಿಗಳನ್ನು ನಡೆಸಿದ ಬೆನ್ನಿಗೇ ಈ ಘಟನೆ ಸಂಭವಿಸಿದೆ. ಗುಜರಾತಿನ ಜನಸಂಖ್ಯೆಯಲ್ಲಿ ಶೇ.15ಕ್ಕೂ ಅಧಿಕ ಪಾಲು ಹೊಂದಿರುವ ಪಟೇಲ್ ಸಮುದಾಯವು ಸರಕಾರಿ ನೌಕರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಸರಣಿ ಪ್ರತಿಭನೆಗಳನ್ನು ನಡೆಸುತ್ತಿದೆ.
ಗುಜರಾತ್‌ನಲ್ಲಿ 1998ರಿಂದಲೂ ಬಿಜೆಪಿ ಅಧಿಕಾರದಲ್ಲಿದೆ. ಆದರೆ ಪಟೇಲರ ಚಳವಳಿ ಮತ್ತು ತಥಾಕಥಿತ ಮೇಲ್ವರ್ಗಗಳ ದೌರ್ಜನ್ಯಗಳ ವಿರುದ್ಧ ದಲಿತ ಸಮುದಾಯಗಳಲ್ಲಿ ಬೆಳೆಯುತ್ತಿರುವ ಕ್ರೋಧ ಬಿಜೆಪಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ವರ್ಷದ ಉತ್ತರಾರ್ಧದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೋದಿಯವರ ಭೇಟಿಯು ರಾಜ್ಯದಲ್ಲಿ ಬಿಜೆಪಿ ಭವಿಷ್ಯವನ್ನು ಬಲಗೊಳಿಸುವ ಪಕ್ಷದ ಪ್ರಯತ್ನಗಳ ಭಾಗವಾಗಿದೆ ಎಂದು ಪರಿಗಣಿಸಲಾಗಿದೆ.





