ಸಿನೆಮಾ ನಿರ್ಮಾಣದ ಅನುಭವ ಭವಿಷ್ಯಕ್ಕೆ ಪೂರಕ : ಭೋಜರಾಜ್
ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಿರುಚಿತ್ರ ‘ರಹದಾರಿ' ಬಿಡುಗಡೆ

ಪುತ್ತೂರು, ಮಾ.7: ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವುದಕ್ಕೆ ವ್ಯಕ್ತಿಗತವಾಗಿ ಸಾಕಷ್ಟು ಉತ್ಸಾಹದ ಅಗತ್ಯವಿದೆ. ಅದರಲ್ಲೂ ಕಿರುಚಿತ್ರ ತಯಾರಿಯಂತಹ ಕೆಲಸಕ್ಕೆ ಕೈಹಾಕುವುದು ಬಹುದೊಡ್ಡ ಸಾಧನೆಯೇ ಸರಿ. ಚಿತ್ರ ನಿರ್ಮಾಣದ ಅನುಭವ ಭವಿಷ್ಯದಲ್ಲಿ ಬಹುದೊಡ್ಡ ಸಹಾಯಕ ಅಂಶವಾಗುತ್ತದೆ ಎಂದು ತುಳು ಚಿತ್ರರಂಗದ ಹಾಸ್ಯ ನಟ ಭೊಜರಾಜ್ ವಾಮಂಜೂರ್ ಹೇಳಿದರು.
ಅವರು ಸೋಮವಾರ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿ ಪ್ರವೀಣ್ ರಾಜ್ ನಿರ್ದೇಶಿಸಿರುವ ‘ರಹದಾರಿ' ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅಧ್ಯಯನವನ್ನು ಮುಂದುವರಿಸಬೇಕು. ಅದರೊಂದಿಗೆ ಸಿನೆಮಾದಂತಹ ನಾನಾ ಬಗೆಯ ಆಸಕ್ತಿ ಕ್ಷೇತ್ರಕ್ಕೂ ಧುಮುಕಬೇಕು. ಎಳೆಯ ವಯಸ್ಸಿನಿಂದಲೇ ತಮ್ಮ ಕ್ಷೇತ್ರವನ್ನು ಗುರುತಿಸಿಕೊಂಡು ಕಾರ್ಯತತ್ಪರರಾದರೆ ನಂತರದ ದಿನಗಳಲ್ಲಿ ಯಶಸ್ಸು ಒಲಿಯುತ್ತದೆ. ತಾನಿನ್ನೂ ಕಲಿಯುವುದಕ್ಕಿದೆ ಎಂಬ ಭಾವ ಪ್ರತಿಯೊಬ್ಬನಲ್ಲೂ ಇರಬೇಕು. ಹಾಗಾದಾಗ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಮಾತನಾಡಿ ಕಾಲೇಜಿನಲ್ಲಿ ಓದಲು ಬರುವ ವಿದ್ಯಾರ್ಥಿಗಳು ಸಿನೆಮಾ ಮಾಡುವುದು ಅಗತ್ಯವೇ ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತದೆ. ಆದರೆ ಪತ್ರಿಕೋದ್ಯಮ ಓದುವ ವಿದ್ಯಾರ್ಥಿಗಳಿಗೆ ಇದೊಂದು ಪ್ರಾಯೋಗಿಕ ಅನುಭವವನ್ನು ಕಟ್ಟಿಕೊಡುತ್ತದೆ. ಅದಾಗಲೇ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಸಾಕಷ್ಟು ಕಿರುಚಿತ್ರವನ್ನು ಹೊರತಂದಿರುವುದು ಹೆಮ್ಮೆಯ ವಿಚಾರ. ಮಾಡಿದ ಚಿತ್ರಗಳು ಸಾರ್ವನಿಕವಾಗಿಯೂ ಪ್ರದರ್ಶನಗೊಂಡರೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರೇರಣೆ ದೊರೆಯುತ್ತದೆ ಎಂದರು.
ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಮಾತನಾಡಿ, ಸುಮಾರು ಎರಡು ವರ್ಷಗಳ ನಿರಂತರ ಶ್ರಮದೊಂದಿಗೆ ರಹದಾರಿ ಚಿತ್ರ ನಿರ್ಮಾಣಗೊಂಡಿದೆ. ಅನೇಕ ವಿದ್ಯಾರ್ಥಿಗಳು ಕೊನೆಯ ಕ್ಷಣದವರೆಗೂ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಇಂದು ಸಿನೆಮಾ, ದಾರಾವಾಹಿ ಕ್ಷೇತ್ರಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅತ್ಯಂತ ಹತ್ತಿರದಲ್ಲೇ ಇವೆ. ಅದರಲ್ಲೂ ತುಳು ಚಿತ್ರರಂಗ ಕರಾವಳಿಯ ಯುವಪೀಳಿಗೆಗೆ ಅನಂತ ಸಾಧ್ಯತೆಯನ್ನು ತೆರೆದಿಡುತ್ತಿದೆ. ಪತ್ರಿಕೋದ್ಯಮ ಓದಿದವರ ಅವಕಾಶಗಳು ವಿಸ್ತತಗೊಳ್ಳುತ್ತಿವೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪತ್ರಿಕೋದ್ಯಮ ವಿಭಾಗ ತನ್ನ ದಶಮಾನೋತ್ಸವ ವರ್ಷದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಿರುಚಿತ್ರ ಬಿಡುಗಡೆ ವಿಭಾಗದ ಕಿರೀಟಕ್ಕೆ ಮತ್ತೊಂದು ಗರಿಯಾಗಿ ಮೂಡಿಬಂದಿದೆ. ನಮ್ಮ ವಿದ್ಯಾರ್ಥಿಗಳಲ್ಲಿರುವ ಸರ್ವತೋಮುಖ ಪ್ರತಿಭೆ ನಾನಾ ವಿಧದಲ್ಲಿ ಜಾಹೀರಾಗುತ್ತಿದೆ. ನಮ್ಮ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಸತ್ವ ಅಡಗಿದೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿ ಮೂಡಿಬಂದಿದೆ. ಈ ಸಿನೆಮಾದಿಂದ ಪಡೆದ ಪ್ರಾಯೋಗಿಕ ಜ್ಞಾನ ಇನ್ನೂ ಅನೇಕ ಸಿನೆಮಾಗಳಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.
ವಿಭಾಗದ ಉಪನ್ಯಾಸಕಿ ಭವ್ಯ ಆರ್ ನಿಡ್ಪಳ್ಳಿ ಸ್ವಾಗತಿಸಿದರು. ಕಿರುಚಿತ್ರ ನಿರ್ದೇಶಕ ಪ್ರವೀಣ್ ರಾಜ್ ಯಾದವ್ ವಂದಿಸಿದರು. ಈ ಸಂದರ್ಭದಲ್ಲಿ ರಹದಾರಿ ಚಿತ್ರ ಪ್ರದರ್ಶನಗೊಂಡಿತು.







