ಉಳ್ಳಾಲ: ಕಿನ್ಯ ಕೂಟು ಝಿಯಾರತ್‌ಗೆ ಚಾಲನೆ

ಉಳ್ಳಾಲ, ಮಾ.7: ಧಾರ್ಮಿಕ ಕ್ಷೇತ್ರದಲ್ಲಿದ್ದುಕೊಂಡು ವಿದ್ಯಾರ್ಜನೆಗೈದರೆ ಮಾತ್ರ ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಅರಿವು ಮೂಡಲು ಸಾಧ್ಯ. ಹಿರಿಯರು, ಗುರುಗಳು, ಪವಾಢ ಪುರುಷರಿಗೆ ಸಲ್ಲಬೇಕಾದ ಗೌರವವನ್ನು ನೀಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಸಯ್ಯದ್ ಆಟಕೋಯ ತಂಙಳ್ ಹೇಳಿದರು.
ಅವರು ಕಿನ್ಯ ಕೇಂದ್ರ ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹುಸೈನ್ ಮುಸ್ಲಿಯಾರ್‌ರವರ ಹೆಸರಿನಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುವ ಕೂಟು ಝಿಯಾರತ್ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಸಾಮೂಹಿಕ ಪ್ರಾರ್ಥನೆಗೆ ಗೌರವ ಜಾಸ್ತಿ ಇದೆ. ಈ ಪ್ರಾರ್ಥನೆಯಿಂದ ನಮಗೆ ಪ್ರತಿಫಲ ಕೂಡಾ ಸಿಗುತ್ತದೆ. ಈ ಅವಕಾಶವನ್ನು ಎಲ್ಲರೂ ಉಪಯೋಗಿಸಿಕೊಂಡು ಹೆಚ್ಚು ಪುಣ್ಯ ಗಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಿನ್ಯ ಮಸೀದಿಯ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಿದರು. ಸಯ್ಯದ್ ಭಾತಿಷ್ ತಂಙಳ್ ಅರ್ಅರಿ, ಕುತುಬಿನಗರ ಮಸೀದಿ ಖತೀಬ್ ಅಬ್ದುರ್ರಝಾಕ್ ಮದನಿ ಕೂಟು ಝಿಯಾರತ್‌ನ ಬಗ್ಗೆ ಸಂದೇಶ ನೀಡಿದರು.
ಸಯ್ಯದ್ ಅಮೀರ್ ತಂಙಳ್ ಕಿನ್ಯ, ಕಿನ್ಯ ಮಸೀದಿ ಖತೀಬ್ ಖಾಸಿಂ ದಾರಿಮಿ, ಕಿನ್ಯ ಕುತುಬಿಯಾ ಮದ್ರಸದ ಸದ್‌ರ್ ಫಾರೂಕ್ ದಾರಿಮಿ, ಕಿನ್ಯ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಸಾಧುಕುಂಞಿ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಕಿನ್ಯ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಅಬೂಸಾಲಿ ಹಾಜಿ ಸ್ವಾಗತಿಸಿದರು.







