ಪಾನೀಪುರಿಗೆ 5 ಲಕ್ಷ ತೆತ್ತ ಲೆಕ್ಕ ಪರಿಶೋಧಕ !
ಅಹ್ಮದಾಬಾದ್, ಮಾ.7: ಇಲ್ಲಿಯ ಮಿಠಾಖಲಿ ಕ್ರಾಸ್ ರೋಡ್ ಬಳಿಯ ಪಾನೀಪುರಿ ಅಂಗಡಿಗೆ ತೆರಳಿದ್ದಾಗ ತನ್ನ ಐದು ಲಕ್ಷ ರೂ.ಕಳ್ಳತನವಾಗಿದೆಯೆಂದು ಲೆಕ್ಕ ಪರಿಶೋಧಕ (ಸಿಎ) ಮುಕೇಶ್ ಚೌಧರಿ(40) ಅವರು ರವಿವಾರ ನವರಂಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸುಳಿವುಗಳಿಗಾಗಿ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ.
ಸ್ವಸ್ತಿಕ್ ಸೊಸೈಟಿ ನಿವಾಸಿಯಾಗಿರುವ ಚೌಧರಿ ಗುಜರಾತ್ ಕಾಲೇಜಿನ ಬಳಿ ತನ್ನ ಕಚೇರಿ ಹೊಂದಿದ್ದಾರೆ. ಮಾ.1ರಂದು ಸಿಜಿ ರಸ್ತೆಯಲ್ಲಿರುವ ತನ್ನ ಸ್ನೇಹಿತ ನಾರಾಯಣ ಪ್ರಜಾಪತಿಯವರ ಕಚೇರಿಗೆ ತೆರಳಿದ್ದ ಅವರು ವಹಿವಾಟೊಂದಕ್ಕೆ ಸಂಬಂಧಿಸಿದ ಮೂರು ಲ.ರೂ.ಗಳನ್ನು ಪಡೆದುಕೊಂಡಿದ್ದರು. ಅವರ ಬಳಿ ಮೊದಲೇ ಎರಡು ಲ.ರೂ.ಗಳಿದ್ದವು. ಎಲ್ಲ ಹಣವನ್ನು ತನ್ನ ಸ್ಕೂಟರ್‌ನ ಡಿಕ್ಕಿಯಲ್ಲಿರಿಸಿದ್ದರು.
ಸಂಜೆ ತನ್ನ ಸ್ಕೂಟರ್‌ನ್ನು ಪಾನೀಪುರಿ ಅಂಗಡಿಯ ಹೊರಗೆ ನಿಲ್ಲಿಸಿ ಒಳಗೆ ತೆರಳಿದ್ದ ಅವರು ಹತ್ತೇ ನಿಮಿಷಗಳಲ್ಲಿ ವಾಪಸ ಬಂದಿದ್ದು,ಅಷ್ಟರೊಳಗೆ ಹಣ ಮಂಗಮಾಯ ವಾಗಿತ್ತು.. ಅವರು ಸ್ಕೂಟರ್ ಚಾವಿಯನ್ನು ಗಾಡಿಯಲ್ಲೇ ಮರೆತುಹೋಗಿದ್ದು, ಅದನ್ನು ಬಳಸಿ ಡಿಕ್ಕಿ ತೆಗೆದ ಕಳ್ಳರು ಹಣದೊಂದಿಗೆ ಪರಾರಿಯಾಗಿದ್ದರು.
ಈ ಘಟನೆಯ ಹಿಂದೆ ಸಂಘಟಿತ ತಂಡದ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.