ಆಮೆಗೆ ಶಸ್ತ್ರಕ್ರಿಯೆ; ಒಡಲಿನಿಂದ 915 ನಾಣ್ಯಗಳು ಹೊರಗೆ

ಬ್ಯಾಂಕಾಕ್, ಮಾ. 7: ಥಾಯ್ಲೆಂಡ್‌ನ ಪಶುವೈದ್ಯರು ಕಡಲಾಮೆಯೊಂದರ ಒಡಲಿನಿಂದ 915 ನಾಣ್ಯಗಳನ್ನು ಹೊರದೆಗೆದು ಅದಕ್ಕೆ ಜೀವದಾನ ಮಾಡಿದ್ದಾರೆ. ಒಳ್ಳೆಯ ಅದೃಷ್ಟ ಬರಲಿ ಎಂದು ಹಾರೈಸಿ ಜನರು ಆಮೆಯಿದ್ದ ಕೊಳಕ್ಕೆ ನಾಣ್ಯಗಳನ್ನು ಬಿಸಾಡುತ್ತಿದ್ದರು ಹಾಗೂ ಈ ಆಮೆಯು ಆ ನಾಣ್ಯಗಳನ್ನು ನುಂಗುತ್ತಿತ್ತು ಎನ್ನಲಾಗಿದೆ. ಹೀಗೆ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿತ್ತು.
25 ವರ್ಷ ಪ್ರಾಯದ ಆಮೆ ‘ಒಮ್ಸಿನ್’ನ ಹೊರಗವಚದಲ್ಲಿ ಇತ್ತೀಚೆಗೆ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಅದನ್ನು ಪಶುವೈದ್ಯರಿಗೆ ತೋರಿಸಲಾಗಿತ್ತು. ಎಕ್ಸ್‌ರೇಯಲ್ಲಿ ಆಮೆಯ ಒಳಗಿದ್ದ ನಾಣ್ಯಗಳ ರಾಶಿ ಪತ್ತೆಯಾಯಿತು.
ಸೋಮವಾರ ಏಳು ಗಂಟೆಗಳ ಕಾಲ ನಡೆದ ಶಸ್ತ್ರಕ್ರಿಯೆಯ ವೇಳೆ ಐದು ಕಿಲೋಗ್ರಾಮ ನಾಣ್ಯಗಳನ್ನು ಹೊರದೆಗೆಯಲಾಯಿತು.
‘‘ಆಮೆಯ ಹೊಟ್ಟೆಯಲ್ಲಿ 915 ನಾಣ್ಯಗಳಿದ್ದವು. ನಾವು ಒಂದರ ನಂತರ ಒಂದರಂತೆ ಅವುಗಳನ್ನು ಹೊರದೆಗೆದೆವು’’ ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ನಂತ್ರಿಕ ಚಾನ್‌ಸ್ಯೂ ತಿಳಿಸಿದರು.
ಆಮೆಯು ಈಗ ಚೇತರಿಸಿಕೊಳ್ಳುತ್ತಿದ್ದು, ಎರಡು ವಾರಗಳ ಕಾಲ ಅದು ನಿಗಾದಲ್ಲಿರಬೇಕಾಗುತ್ತದೆ ಎಂದು ಅವರು ಹೇಳಿದರು.







