ಮತ್ತೇ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ: ಯು.ಟಿ. ಖಾದರ್
ಬಂಟ್ವಾಳ, ಮಾ. 7: ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದೆ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡಿದೆ. ಮುಂದಿನ ಐದು ವರ್ಷದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರಕ್ಕೆ ಬರಲಿದೆಯೇ ಹೊರತು ಬೇರೆ ಯಾವುದೇ ಪಕ್ಷ ಅಧಿಕಾರ ಹಿಡಿಯುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
ನೂತನವಾಗಿ ಡಾಮರೀಕರಣಗೊಂಡ ತುಂಬೆ ಅಹ್ಮದ್ ಹಾಜಿ ರಸ್ತೆಯನ್ನು ಉದ್ಘಾಟಿಸಿ ಬಳಿಕ ತುಂಬೆ ವಲಯ ಕಾಂಗ್ರೆಸ್ ವತಿಯಿಂದ ನಡೆದ ಸನ್ಮಾನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದಿನ ಬಿಜೆಪಿ ಆಡಳಿತ ಪ್ರತೀ ಆರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಾ ಜನರಿಗೆ ಮನರಂಜನೆ ನೀಡುತ್ತಿತ್ತು ಎಂದು ಲೇವಡಿ ಮಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸರಕಾರಿ ಶಾಲೆಗಳಿಗೆ ಒಂದೇ ಒಂದು ಕೊಠಡಿ ಮಂಜೂರಾಗಿಲ್ಲ. ಯುವಕರಿಗೆ ಉದ್ಯೊಗ ಸಿಗುತ್ತಿಲ್ಲ ಎಂದು ಆರೋಪಿಸಿದ ಅವರು 7.6 ಇದ್ದ ದೇಶದ ಜಿಡಿಪಿ ಶೇ. 1 ಕುಸಿದಿದೆ. ಇದರಿಂದಾಗಿ 1.5 ಕೋಟಿ ರೂಪಾಯಿ ದೇಶಕ್ಕೆ ನಷ್ಟವಾಗಿದೆ ಎಂದು ಆರೋಪಿಸಿದರು. ಬಡಜನರ ಖಾತೆಗೆ 15 ಲಕ್ಷ ಬಿಡಿ 15 ರೂಪಾಯಿ ಬಂದಿಲ್ಲ, ಹೊರದೇಶದ ಕಪ್ಪು ಹಣ ಬರುವ ಮೊದಲು ವಿದೇಶದಲ್ಲೇ ಸುತ್ತುತ್ತಿರುವ ಪ್ರಧಾನಿ ದೇಶಕ್ಕೆ ಬರಲಿ ಎಂದು ಕುಟುಕಿದರು.
ರಸ್ತೆ ನಿರ್ಮಾಣಕ್ಕೆ ಸ್ಥಳ ದಾನಿಗಳಾದ ಬಿ.ಎ. ಗ್ರೂಪ್‌ನ ಸಂಸ್ಥಾಪಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಹಾಗೂ ಬಸ್ತಿ ವಾಮನ ಶೆಣೈರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತುಂಬೆ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ ಅಧ್ಯಕ್ಷತೆ ವಹಿಸಿದ್ದರು.
ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಬೋಳಿಯಾರ್ ತಾಪಂ ಸದಸ್ಯ ಜಬ್ಬಾರ್, ತುಂಬೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ಲತೀಫ್ ಫೈಝಿ, ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಪ್ರಕಾಶ್ ಶೆಟ್ಟಿ ಶ್ರೀಶೈಲಾ, ಪ್ರವೀಣ್, ಮಹಾಬಲ ವೇದಿಕೆಯಲ್ಲಿದ್ದರು.
ನಿಸಾರ್ ಅಹಮ್ಮದ್ ಸ್ವಾಗತಿಸಿ, ಅಬ್ದುಲ್ ರಶೀದ್ ಕಾರ್ಯಕ್ರಮ ನಿರೂಪಿಸಿದರು.







