8 ಕೋಟಿ ರೂ. ಖರ್ಚು ಮಾಡಿದ ಮಹಾರಾಷ್ಟ್ರ
ಮೋದಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ತುರ್ತು ನಿಧಿಯಿಂದ
ಮುಂಬೈ,ಮಾ.7: ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಿವಿಧ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಮಹಾರಾಷ್ಟ್ರ ಸರಕಾರವು ತನ್ನ ತುರ್ತುನಿಧಿಯಿಂದ 8 ಕೋಟಿ ರೂ.ಖರ್ಚು ಮಾಡಿತ್ತು. ಡಿಸೆಂಬರ್ 24ರಂದು ಪ್ರಧಾನಿ ಮೋದಿ ಮುಂಬೈನ ಅರಬಿಸಮುದ್ರದ ಬಂಡೆಯಲ್ಲಿ ನಿರ್ಮಿಸಲಾಗುವ ಛತ್ರಪತಿ ಶಿವಾಜಿ ಸ್ಮಾರಕ ಶಿಲಾನ್ಯಾಸದ ವೇಳೆ ನಡೆದ ‘ಜಲಪೂಜನ್’ಕಾರ್ಯಕ್ರಮ ಕೂಡಾ ಇದರಲ್ಲಿ ಒಳಗೊಂಡಿದೆ ಎಂದು ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಬುಧವಾರ ತಿಳಿಸಿದೆ.
ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು ಹಣಕಾಸು ಇಲಾಖೆಯು ಮಂಡಿಸಿದ ಅನುದಾನಗಳಿಗಾಗಿನ ಪೂರಕ ಬೇಡಿಕೆಯಲ್ಲಿ ಲೋಕೋಪಯೋಗಿ ಇಲಾಖೆಯು ಈ ವಿಷಯವನ್ನು ತಿಳಿಸಿದೆ.
‘‘ಛತ್ರಪತಿ ಶಿವಾಜಿ ಮಹಾರಾಜ್ ಅವರ ಸ್ಮಾರಕದ ಜಲಪೂಜನ ಕಾರ್ಯಕ್ರಮ, ಮುಂಬೈ ಮೆಟ್ರೋ ಲೈನ್ ಉದ್ಘಾಟನೆ, ಸ್ವೆರೀ-ನವಶೇವಾ ಯೋಜನೆ ಹಾಗೂ ಮುಂಬೈ ನಗರ ಸಾರಿಗೆ ಯೋಜನೆ(ಎಂಯುಟಿಪಿ)ಯಡಿ ನೂತನ ರೈಲು ಮಾರ್ಗ ಯೋಜನೆಗಳ ಶಿಲಾನ್ಯಾಸದ ಜಾಹೀರಾತು ಹಾಗೂ ಪ್ರಚಾರಕ್ಕಾಗಿ ತುರ್ತುನಿಧಿಯಿಂದ 9 ಕೋಟಿ ರೂ.ಒದಗಿಸಲಾಗಿತ್ತು ಎಂದು ಇಲಾಖೆ ತಿಳಿಸಿದೆ. ಈ ವೆಚ್ಚವು ತುರ್ತು ಸ್ವರೂಪದ್ದಾಗಿದ್ದರಿಂದ ಈ ಮೊತ್ತವನ್ನು ತುರ್ತುನಿಧಿಯಿಂದ ಪಡೆಯಲಾಗಿದೆಯೆಂದು ಇಲಾಖೆ ಸಮಜಾಯಿಷಿ ನೀಡಿದೆ.
ಆದರೆ ಸರಕಾರದ ಈ ಕ್ರಮವನ್ನು ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ, ಎನ್‌ಸಿಪಿಯ ಧನಂಜಯ್ ಮುಂಢೆ ಟೀಕಿಸಿದ್ದಾರೆ.
ತುರ್ತು ಉದ್ದೇಶಗಳಿಗಾಗಿಯೇ ತುರ್ತು ನಿಧಿಯನ್ನು ಮೀಸಲಿಡಲಾಗಿದ್ದು, ಅದನ್ನು ಜಾಗರೂಕತೆಯಿಂದ ಬಳಸಬೇಕಾಗಿದೆ. ಆದಾಗ್ಯೂ ರಾಜ್ಯ ಸರಕಾರವು ಯಾವುದೇ ಉದ್ದೇಶಗಳಿಗೂ ತುರ್ತು ನಿಧಿಯನ್ನು ಬಳಸಿಕೊಳ್ಳುವುದು ರಾಜ್ಯ ಸರಕಾರಕ್ಕೆ ಸಾಮಾನ್ಯ ಪದ್ಧತಿಯಾಗಿ ಬಿಟ್ಟಿದೆ ಎಂದಿದ್ದಾರೆ.
ರೈತರಿಗೆ ಆರ್ಥಿಕ ನೆರವು ನೀಡಲು ಈ ಸರಕಾರದ ಬಳಿ ಹಣವಿಲ್ಲ. ಇದೇ ವೇಳೆ ಕೇವಲ ಪ್ರಚಾರದ ಉದ್ದೇಶಗಳಿಗಾಗಿ ಅದು ತುರ್ತು ನಿಧಿಯನ್ನು ಬಳಸಿಕೊಳ್ಳುತ್ತಿದೆಯೆಂದು ಧನಂಜಯ್ ಟೀಕಿಸಿದ್ದಾರೆ.
...............................
ಲಕ್ನೊ: ಕಟ್ಟಡದಲ್ಲಿ ಅವಿತಿರುವ ಶಂಕಿತ ಉಗ್ರನ ಬಂಧನಕ್ಕೆ ಕಾರ್ಯಾಚರಣೆ
ಲಕ್ನೊ,ಮಾ.7: ನಗರದ ಹೊರವಲಯದ ಕಟ್ಟಡವೊಂದರಲ್ಲಿ ಅವಿತುಕೊಂಡಿರುವ ಉಗ್ರನ ಬಂಧನಕ್ಕಾಗಿ ಮಂಗಳವಾರ ಮಧ್ಯರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿದೆ. ಲಕ್ನೋದ ಹೊರವಲಯದಲ್ಲಿರುವ ಜನನಿಬಿಡ ಕಾಕೋರಿ ಪ್ರದೇಶದ ಕಟ್ಟಡದಲ್ಲಿ ಅವಿತುಕೊಂಡಿರುವ ಶಂಕಿತ ಉಗ್ರನು ಸುತ್ತುವರಿದಿರುವ ಭದ್ರತಾಪಡೆಗಳ ಮೇಲೆ ಗುಂಡು ಹಾರಿಸಿರುವುದಾಗಿ ವರದಿಯಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕಾರ್ಯಾಚರಣೆ ನಡೆಯುತ್ತಿರುವ ಆಸುಪಾಸಿನ ಪರಿಸರದ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಶಂಕಿತ ಉಗ್ರ ಶರಣಾಗಲು ನಿರಾಕರಿಸುತ್ತಿದ್ದು, ಆತನನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಲಾಗುತ್ತಿದೆಯೆಂದು ಲಕ್ನೊದ ಪೊಲೀಸ್ ಮಹಾನಿರೀಕ್ಷಕ ಸತೀಶ್ ಗಣೇಶ್ ತಿಳಿಸಿದ್ದಾರೆ. ಈ ಮಧ್ಯೆ ಕಟ್ಟಡದೊಳಗೆ ಇನ್ನೋರ್ವ ಉಗ್ರನೂ ಇರುವ ಸಾಧ್ಯತೆಯಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೆಲವು ಶಂಕಿತ ಉಗ್ರರು ಬೀಡುಬಿಟ್ಟಿರುವ ಸಾಧ್ಯತೆಯಿದೆಯೆಂಬ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆಯೆಂದು ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧುರಿ ಹೇಳಿದ್ದಾರೆ. ಶಂಕಿತ ಉಗ್ರನಿಗೆ ಇಂದು ಬೆಳಗ್ಗೆ ಉಜ್ಜಯಿನಿಯಲ್ಲಿ ನಡೆದ ರೈಲು ಸ್ಫೋಟದ ಜೊತೆ ನಂಟು ಇರುವ ಸಾಧ್ಯತೆಯಿದೆಯೆಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯ ಬಳಿ ಮಂಗಳವಾರ ಬೆಳಗ್ಗೆ ರೈಲೊಂದರ ಬೋಗಿಯಲ್ಲಿ ನಡೆದ ಸ್ಫೋಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದರು. ಭೋಪಾಲ್‌ನಿಂದ ಉಜ್ಜಯಿನಿಗೆ ಆಗಮಿಸುತ್ತಿದ್ದ ಪ್ಯಾಸೆಂಜ್ ರೈಲಿನಲ್ಲಿ ಸ್ಫೋಟ ನಡೆದಿತ್ತು. ಗಾಯಾಳುಗಳಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆಯೆಂದು ತಿಳಿದುಬಂದಿದೆ.
ತನ್ಮಧ್ಯೆ ಉಜ್ಜಯಿನಿ ರೈಲು ಸ್ಫೋಟ ಘಟನೆಯಲ್ಲಿ ಶಾಮೀಲಾದ ಗುಂಪಿನ ಗುರುತನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಾಗಿದೆ. ಈ ವಿಧ್ವಂಸ ಕೃತ್ಯದಲ್ಲಿ ಯಾವ ಗುಂಪು ಭಾಗಿಯಾಗಿದೆಯೆಂದು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆಯೆಂದು ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಧ್ಯಪ್ರದೇಶ ಉಜ್ಜಯಿನಿ ಬಳಿ ಇಂದು ಬೆಳಗ್ಗೆ ನಡೆದ ರೈಲು ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿರುವ ಉಗ್ರಗಾಮಿ ಗುಂಪಿನ ಜೊತೆ ನಂಟು ಹೊಂದಿದ್ದಾನೆಂದು ಶಂಕಿಸಲಾದ ಇಬ್ಬರನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ಪೊಲೀಸರು ಕಾನ್ಪುರದಲ್ಲಿ ಬಂಧಿಸಿದ್ದಾರೆ.







