ಟೀಮ್ ಇಂಡಿಯಾಕ್ಕೆ ಚೀನಾ ಮೊಬೈಲ್ ಕಂಪೆನಿ ಒಪ್ಪೊ ಪ್ರಾಯೋಜಕತ್ವ!
1,059 ಕೋ.ರೂ.ಗೆ ಬಿಡ್ಡಿಂಗ್

ಮುಂಬೈ, ಮಾ.7: ಮೊಬೈಲ್ ಉತ್ಪಾದನಾ ಕಂಪೆನಿ ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೈ.ಲಿ. ಎ.1,2017 ರಿಂದ ಮುಂದಿನ ಐದು ವರ್ಷಗಳ ತನಕ ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಹಕ್ಕನ್ನು 1,059 ಕೋ.ರೂ.ಗೆ ಗೆದ್ದುಕೊಂಡಿದೆ ಎಂದು ಬಿಸಿಸಿಐ ಘೋಷಿಸಿದೆ.
ಅಧಿಕೃತ ಟೀಮ್ ಟೈಟಲ್ ಪ್ರಾಯೋಜಕತ್ವ, ಭಾರತದ ಪುರುಷರ, ಮಹಿಳೆಯರ, ‘ಎ’ ಹಾಗೂ ಅಂಡರ್-19 ತಂಡಗಳ ಕಿಟ್ಸ್‌ಗಳಲ್ಲಿ ವಾಣಿಜ್ಯ ಲಾಂಛನ ಅಳವಡಿಸುವುದು ತಂಡದ ಪ್ರಾಯೋಜಕತ್ವದ ಹಕ್ಕಿನಲ್ಲಿ ಒಳಗೊಂಡಿದೆ. ಹಾಲಿ ಸ್ಟಾರ್ ಇಂಡಿಯಾದ ನಾಲ್ಕು ವರ್ಷಗಳ ಪ್ರಾಯೋಜಕತ್ವದ ಹಕ್ಕು ಅವಧಿ ಈ ತಿಂಗಳು ಕೊನೆಗೊಳ್ಳಲಿದೆ.
ಸ್ಟಾರ್ ಇಂಡಿಯಾ ಸಹಿತ 6 ಕಂಪೆನಿಗಳು ಟೆಂಡರ್ ದಾಖಲೆ ಸಲ್ಲಿಸಿದ್ದವು. ಈ ಪೈಕಿ ಚೀನಾ ಕಂಪೆನಿಗಳಾದ ಒಪ್ಪೊ ಹಾಗೂ ವಿವೊ ಬಿಡ್ಡಿಂಗ್‌ಗೆ ಹಾಜರಾಗಿದ್ದವು. ಬಿಡ್ಡಿಂಗ್‌ನಲ್ಲಿ ಒಪ್ಪೊ ಕಳೆದ ಬಾರಿಯ ಬಿಡ್ಡಿಂಗ್‌ಗಿಂತ 5 ಪಟ್ಟು ಹೆಚ್ಚು ಎಂದು ಸಿಇಒ ರಾಹುಲ್ ಜೊಹ್ರಿ ತಿಳಿಸಿದ್ದಾರೆ.
ಸ್ಟಾರ್ ಇಂಡಿಯಾ 2013 ಡಿಸೆಂಬರ್‌ನಲ್ಲಿ ಸಹಾರ ಇಂಡಿಯಾದಿಂದ ಭಾರತೀಯ ಕ್ರಿಕೆಟ್ ತಂಡದ ಪ್ರಾಯೋಜಕತ್ವ ಪಡೆದಿತ್ತು. 2014ರ ಜನವರಿಯಲ್ಲಿ ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತೀಯ ಕ್ರಿಕೆಟಿಗರ ಜರ್ಸಿಯಲ್ಲಿ ಮೊದಲ ಬಾರಿ ಸ್ಟಾರ್ ಇಂಡಿಯಾ ಲಾಂಛನ ಕಾಣಿಸಿಕೊಂಡಿತ್ತು.
2022ರ ತನಕ ಭಾರತ ಕ್ರಿಕೆಟ್ ತಂಡ ಬಿಡುವಿಲ್ಲದ ಕ್ರಿಕೆಟ್ ಆಡಲಿದೆ. ಐಸಿಸಿ ಭವಿಷ್ಯದ ಕಾರ್ಯಕ್ರಮ ಪಟ್ಟಿಯ ಪ್ರಕಾರ ಭಾರತ 2017ರ ಜೂನ್‌ರಿಂದ 2022ರ ಮಾರ್ಚ್ ತನಕ 259 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಇದರಲ್ಲಿ 62 ಟೆಸ್ಟ್, 152 ಏಕದಿನ ಹಾಗೂ 45 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿವೆ. ಈ ಸಂದರ್ಭದಲ್ಲಿ ಪ್ರಮುಖ ಟೂರ್ನಿಗಳು ನಡೆಯುತ್ತವೆ. 2019ರಲ್ಲಿ ಇಂಗ್ಲೆಂಡ್‌ನಲ್ಲಿ ವಿಶ್ವಕಪ್, 2020ರಲ್ಲಿ ಆಸ್ಟ್ರೇಲಿಯದಲ್ಲಿ ಟ್ವೆಂಟಿ-20 ವಿಶ್ವಕಪ್ ನಿಗದಿಯಾಗಿದೆ.







