ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಿ ನಿರಾಕರಣೆ: ಕೇರಳ ಸಿಎಂ
ತಿರುವನಂತಪುರಂ,ಮಾ.7: ರಾಜ್ಯದಿಂದ ಸರ್ವಪಕ್ಷ ನಿಯೋಗವೊಂದನ್ನು ಭೇಟಿಯಾಗಲು ಪ್ರಧಾನಿ ನರೇಂದ್ರ ಮೋದಿಯವರು ನಿರಾಕರಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಲಿಖಿತ ಹೇಳಿಕೆಯೊಂದರಲ್ಲಿ ತಿಳಿಸಿದರು.
ಪಡಿತರ ಅಕ್ಕಿ ಕೋಟಾದಲ್ಲಿ ಕಡಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಅಹವಾಲನ್ನು ಸಲ್ಲಿಸಲು ಮತ್ತು ರಾಜ್ಯದಲ್ಲಿಯ ಬರ ಪರಿಸ್ಥಿತಿಯನ್ನು ಎದುರಿಸಲು ಹಣಕಾಸು ನೆರವು ಕೋರಲು ಮಾ.20 ಅಥವಾ 21ರಂದು ಪ್ರಧಾನಿಯೊಂದಿಗೆ ಭೇಟಿಯನ್ನು ಕೋರಲಾಗಿತ್ತು. ಇದಕ್ಕೆ ಉತ್ತರವಾಗಿ ಪ್ರಧಾನಿ ಕಚೇರಿಯು, ತನ್ನ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಭೇಟಿಗೆ ಪ್ರಧಾನಿಯವರ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದೆ. ಅದು ಪ್ರಧಾನಿ ಜೊತೆ ಭೇಟಿಗೆ ಬೇರೊಂದು ದಿನಾಂಕವನ್ನು ಸೂಚಿಸಿಲ್ಲ, ಬದಲಾಗಿ ರಾಜ್ಯ ನಿಯೋಗವು ಕೇಂದ್ರ ಗೃಹ ಸಚಿವರು ಮತ್ತು ವಿತ್ತ ಸಚಿವರನ್ನು ಭೇಟಿಯಾಗಬಹುದೆಂದು ಸೂಚಿಸಿದೆ ಎಂದು ಪಿಣರಾಯಿ ವಿವರಿಸಿದರು.
ಮೋದಿಯವರಿಗೆ ಗೊತ್ತಿದ್ದೇ ಪ್ರಧಾನಿ ಕಚೇರಿಯು ಈ ಉತ್ತರವನ್ನು ನೀಡಿರಬೇಕು ಮತ್ತು ಈ ನಿಲುವು ಅತ್ಯಂತ ಖಂಡನೀಯವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಒಕ್ಕೂಟವಾದದ ತತ್ತ್ವಗಳಿಗೂ ವಿರುದ್ಧವಾಗಿದೆ ಎಂದು ಹೇಳಿದ ಅವರು, ಇದರ ಹಿಂದಿನ ತರ್ಕ ನಮಗರ್ಥವಾಗುತ್ತಿಲ್ಲ ಎಂದರು.
ರಾಜ್ಯ ನಿಯೋಗಕ್ಕೆ ಮೋದಿ ಭೇಟಿಗೆ ಅವಕಾಶ ನಿರಾಕರಿಸಿರುವುದನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ರಮೇಶ ಚೆನ್ನಿತಲ ಅವರು, ಇದು ಕೇರಳದ ಜನತೆಗೆ ಮಾಡಿರುವ ಅವಮಾನ ಎಂದು ಹೇಳಿದರು.
ಸದನದಲ್ಲಿ ಬಿಜೆಪಿಯ ಏಕೈಕ ಸದಸ್ಯರಾಗಿರುವ ಒ.ರಾಜಗೋಪಾಲ್ ಅವರು ಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕರ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರಧಾನಿಯವರು ಸದಾ ವ್ಯಸ್ತರಾಗಿರುವುದರಿಂದ ರಾಜ್ಯವು ತಾನೇ ದಿನಾಂಕವನ್ನು ಸೂಚಿಸುವ ಬದಲು ಪ್ರಧಾನಿ ಕಚೇರಿಯಿಂದ ಸೂಕ್ತ ದಿನಾಂಕವನ್ನು ಕೋರಬೇಕಾಗಿತ್ತು ಎಂದು ಸಮರ್ಥಿಸಿಕೊಂಡರು.