ಜೋಧ್‌ಪುರ ವಿವಿ ಪ್ರಾಧ್ಯಾಪಕಿಯ ಅಮಾನತಿಗೆ ತಡೆಯಾಜ್ಞೆ
ಕ್ಯಾಂಪಸ್ ರಾಜಕಾರಣಕ್ಕೆ ರಾಜಸ್ಥಾನ ಹೈಕೋರ್ಟ್ ಬ್ರೇಕ್
ಜೈಪುರ,ಮಾ.7: ವಿವಾದಾಸ್ಪದ ವಿಚಾರಸಂಕಿರಣ ವನ್ನು ಆಯೋಜಿಸಿದ್ದಕ್ಕಾಗಿ ಪ್ರಾಧ್ಯಾಪಕಿಯೊಬ್ಬರ ವಿರುದ್ಧ ಜೋಧ್‌ಪುರ ವಿವಿ ಆಡಳಿತ ಮಂಡಳಿ ಹೊರಡಿಸಿದ್ದ ಅಮಾನತು ಆದೇಶಕ್ಕೆ ರಾಜಸ್ಥಾನ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.
ಜೋಧ್‌ಪುರದ ಜೈನಾರಾಯಣ್ ವ್ಯಾಸ್ ವಿವಿಯ ಇಂಗ್ಲಿಷ್ ಪ್ರಾಧ್ಯಾಪಕಿ ಡಾ. ರಾಜಶ್ರೀ ರಾಣಾವತ್ ಅವರು ಫೆಬ್ರವರಿಯಲ್ಲಿ ‘ಸಾಹಿತ್ಯದ ಮೂಲಕ ಇತಿಹಾಸದ ಪುನಾರಚನೆ’ ಎಂಬ ವಿಚಾರಸಂಕಿರಣವನ್ನು ಆಯೋಜಿಸಿದ್ದರು. ಪ್ರಾಧ್ಯಾಪಕಿ ನಿವೇದಿತಾ ಮೆನನ್ ಎಂಬವರು ವಿಚಾರಸಂಕಿರಣದಲ್ಲಿ ಕೆಲವೊಂದು ವಿವಾದಾತ್ಮಕ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರೆನ್ನಲಾಗಿದೆ. ಇದರ ವಿರುದ್ಧ ಸಂಘಪರಿವಾರ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಿದ್ದರು. ಡಾ. ಮೆನನ್ ಅವರು ಕಾಶ್ಮೀರದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ ಹಾಗೂ ಭಾರತೀಯ ಸೇನೆ ಮತ್ತು ಭಾರತ ಮಾತೆಯ ಘನತೆಗೆ ಕುಂದುಂಟು ಮಾಡಿದ್ದಾರೆಂದು ಎಬಿವಿಪಿ ಅಧ್ಯಕ್ಷ ಕುನಾಲ್‌ಸಿಂಗ್ ಭಟಿ ಆರೋಪಿಸಿದ್ದರು. ವಿಚಾರಸಂಕಿರಣದಲ್ಲಿ ಭಾಗವಹಿಸಿರದ ಕುನಾಲ್‌ಸಿಂಗ್, ತನ್ನ ಆರೋಪಗಳಿಗೆ ಪತ್ರಿಕಾವರದಿಗಳನ್ನೇ ಆಧಾರವಾಗಿ ನೀಡಿದ್ದರು.
ವಿವಾದದ ಬೆನ್ನಲ್ಲೇ ವಿವಿಯ ಆಡಳಿತ ಮಂಡಳಿಯು ರಾಣಾವತ್ ಅವರ್ನು ಅಮಾನತು ಗೊಳಿಸಿತು ಹಾಗೂ ಅವರ ಉಚ್ಚಾಟನೆಯ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿತು.
ತನ್ನ ಅಮಾನತನ್ನು ಪ್ರಶ್ನಿಸಿ ರಾಣಾವತ್ ರಾಜಸ್ತಾನ ಹೈಕೋರ್ಟ್ ಮೆಟ್ಟಲೇರಿದರು. ಸೋಮವಾರ ಪ್ರಕರಣದ ಆಲಿಕೆಯನ್ನು ನಡೆಸಿದ ದಿನೇಶ್ ಮೆಹ್ತಾ ಅವರಿದ್ದ ನ್ಯಾಯಪೀಠವು ರಾಣಾವತ್ ಅವರ ಅಮಾನತಿಗೆ ತಡೆಯಾಜ್ಞೆ ನೀಡಿದೆ.
ವಿಚಾರಸಂಕಿರಣದಲ್ಲಿ ಭಾಷಣ ಮಾಡಲು ನಿರ್ದಿಷ್ಟ ವ್ಯಕ್ತಿಯೊಬ್ಬರನ್ನು ಆಹ್ವಾನಿಸಿದ್ದಾರೆಂಬ ಏಕೈಕ ಕಾರಣಕ್ಕಾಗಿ ರಾಣಾವತ್ ಅವರನ್ನು ಅಮಾನತುಗೊಳಿಸಿರುವ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು ಹಾಗೂ ಈ ಬಗ್ಗೆ ಉಪಕುಲಪತಿ ಆರ್.ಪಿ.ಸಿಂಗ್, ರಿಜಿಸ್ಟ್ರಾರ್ ಹಾಗೂ ವಿಶ್ವವಿದ್ಯಾನಿಲಯದ ಆಡಳಿತಮಂಡಳಿಗೆ ನೋಟಿಸ್ ಜಾರಿಗೊಳಿಸಿದ್ದು,ಪ್ರಕರಣದ ಮುಂದಿನ ಆಲಿಕೆಯನ್ನು ಎಪ್ರಿಲ್7ಕ್ಕೆ ನಿಗದಿಪಡಿಸಿದೆ.