ರಾಮ್‌ದೇವ್‌ಗೆ ಅಗ್ಗದ ದರಕ್ಕೆ ಭೂಮಿ: ಪ್ರಶ್ನಿಸಿದ ಹಿರಿಯ ಅಧಿಕಾರಿ ಎತ್ತಂಗಡಿ

ಮುಂಬೈ, ಮಾ.8: ನಾಗ್ಪುರದಲ್ಲಿ ಫುಡ್‌ಪಾರ್ಕ್ ಸ್ಥಾಪನೆಗೆ ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪೆನಿಗೆ ಶೇಕಡ 75ರಷ್ಟು ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡಿರುವ ಕ್ರಮವನ್ನು ಪ್ರಶ್ನಿಸಿದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕಿರುಕುಳ ನೀಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಯಿಂದ ಈ ಅಂಶ ಬೆಳಕಿಗೆ ಬಂದಿದೆ. ಹಣಕಾಸು ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿಜಯ್ ಕುಮಾರ್, ಈ ಪಕ್ಷಪಾತ ಧೋರಣೆ ಬಗ್ಗೆ ಆತಂಕ ವ್ಯಕ್ತಪಡಿಸಿ, ಲಿಖಿತವಾಗಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗೆ ಬೆಲೆಯನ್ನು ಕಡಿತಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿದ ಮೂರೇ ವಾರಗಳಲ್ಲಿ ಅಂದರೆ 2016ರ ಎಪ್ರಿಲ್ 29ರಂದು ಅವರನ್ನು ವರ್ಗಾಯಿಸಲಾಗಿದೆ. ಸಾಮಾನ್ಯವಾಗಿ ಈ ಹುದ್ದೆಗೆ ಮೂರು ವರ್ಷಗಳ ಅಧಿಕಾರಾವಧಿ ಇದ್ದರೂ ಒಂದೂವರೆ ವರ್ಷಕ್ಕೇ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಇದೀಗ ಕುಮಾರ್ ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ನಿಗಮ ಈ ಭೂಮಿ ಹಂಚಿಕೆ ಮಾಡಿದ್ದು, ಇಡೀ ಪ್ರಕ್ರಿಯೆ ಪಾರದರ್ಶಕ ಹಾಗೂ ಮುಕ್ತ ಬಿಡ್ಡಿಂಗ್ ಮೂಲಕವೇ ಹಂಚಿಕೆ ಮಾಡಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಕುಮಾರ್ ಅವರ ವರ್ಗಾವಣೆ ಮಾಮೂಲಿ ಪ್ರಕ್ರಿಯೆಯಾಗಿದ್ದು, ಅವರ ಆಯ್ಕೆಯ ಹುದ್ದೆಯನ್ನೇ ನೀಡಲಾಗಿದೆ ಎಂದು ಹೇಳಿದ್ದಾರೆ.
ನಾಗ್ಪುರದ ಬಹು ಮಾದರಿ ಅಂತಾರಾಷ್ಟ್ರೀಯ ಹಬ್ ವಿಮಾನ ನಿಲ್ದಾಣದ ಜಾಗದಲ್ಲಿ ಫುಡ್‌ಪಾರ್ಕ್‌ಗೆ ಈ ದರದಲ್ಲಿ ಭೂಮಿ ನೀಡಲು ನಾಲ್ಕು ಮಂದಿ ಸದಸ್ಯರ ಉಪ ಸಮಿತಿ ಶಿಫಾರಸು ಮಾಡಿತ್ತು. ಕುಮಾರ್ ಅವರೂ ಈ ಸಮಿತಿಯ ಸದಸ್ಯರಾಗಿದ್ದರು. ಇವರ ಜತೆಗೆ ಎಂಐಡಿಸಿ ಸಿಇಒ ಭೂಷಣ್ ಗಂಗ್ರಾಣಿ, ಅಂದಿನ ವಿಸಿ ಹಾಗೂ ಎಂಎಡಿಸಿ ಎಂಡಿ ವಿಶ್ವಾಸ್ ಪಾಟೀಲ್ ಅವರೂ ಸದಸ್ಯರಾಗಿದ್ದರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನಿತಿನ್ ಕರೀರ್ ಇದರ ಅಧ್ಯಕ್ಷರಾಗಿದ್ದರು. ಎಂಎಡಿಸಿ ದರ ಎಕರೆಗೆ ಒಂದು ಕೋಟಿ ಇದ್ದರೂ, ಸಮಿತಿ ರೂ.25 ಲಕ್ಷ ದರದಲ್ಲಿ ಫುಡ್‌ಪಾರ್ಕ್‌ಗೆ ಭೂಮಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ 2016ರ ಆಗಸ್ಟ್‌ನಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್ ಕಂಪೆನಿಗೆ 230 ಎಕರೆ ಭೂಮಿಯನ್ನು ಕೇವಲ 58.63 ಕೋಟಿ ರೂಪಾಯಿಗೆ 66 ವರ್ಷಗಳ ಲೀಸ್ ಆಧಾರದಲ್ಲಿ ನೀಡಲಾಗಿತ್ತು.