ಪತಿಯನ್ನು ಭೀಕರವಾಗಿ ಕೊಂದ ಪತ್ನಿ, ಮೂಕಸಾಕ್ಷಿಯಾದ ಬಾಲಕಿ

ಹೊಸದಿಲ್ಲಿ, ಮಾ.8: ಕ್ಷುಲ್ಲಕ ಕಾರಣಕ್ಕೆ ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬರು ತನ್ನ ಪತಿಯನ್ನು ಸುತ್ತಿಗೆಯಿಂದ ಜಜ್ಜಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದ್ದು, ಈ ಭೀಕರ ಘಟನೆಗೆ ನಾಲ್ಕರ ಬಾಲಕಿ ಮೂಕ ಸಾಕ್ಷಿಯಾಗಿತ್ತು.
ನಾಲ್ಕರ ಬಾಲಕಿ ರಾತ್ರಿ ಹೊತ್ತು ಟಿವಿನೋಡುತ್ತಿದ್ದ ಸಂದರ್ಭದಲ್ಲಿ ತನಗೆ ಔಷಧಿ ತರಲಿಲ್ಲ ಎಂದು ಕೋಪಿಸಿಕೊಂಡ ಪತ್ನಿ ಗಂಡನನ್ನು ಸುತ್ತಿಗೆಯಿಂದ ಹಲವು ಬಾರಿ ಚಚ್ಚಿ ಕೊಲೆ ಮಾಡಿದ್ದಾಳೆ. ತಾಯಿ ಕಿರುಚಿದ ಶಬ್ಬ ಕೇಳಿ ಕೋಣೆಯೊಳಗೆ ಹೋದ ಬಾಲಕಿ ತಂದೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾಗಿ ಸಣ್ಣ ಮನೆಯ ಮೂಲೆಯಲ್ಲಿ ರಾತ್ರಿ ಕಳೆದಿದೆ.
ಮಾನಸಿಕಕಾಯಿಲೆಯಿಂದ ಬಳಲುತ್ತಿರುವ 32ರ ಹರೆಯದ ಹನ್ಸಿ ಎಂಬಾಕೆ ನರೇಲ ಸೆಕ್ಟರ್‌ನಲ್ಲಿ ವಾಸವಾಗಿದ್ದು, ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ 35ರ ಹರೆಯದ ಕಮಲ್‌ಕುಮಾರ್ ಔಷಧಿ ತರಲಿಲ್ಲ ಎಂಬ ಕಾರಣಕ್ಕೆ ಆತ ಮಲಗಿದ್ದ ವೇಳೆ ಸುತ್ತಿಗೆಯಿಂದ ಹಲವು ಬಾರಿ ಚಚ್ಚಿ ಸಾಯಿಸಿದ್ದಾಳೆ. ಹನ್ಸಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕಮಲ್ ಮೃದು ಸ್ವಭಾವದವರಾಗಿದ್ದು, ಕಾಲನಿಯ ಎಲ್ಲರೊಂದಿಗೆ ಬೆರೆಯುತ್ತಿದ್ದರು.
ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಕಮಲ್ ಮಾನಸಿಕ ಅಸ್ವಸ್ಥೆಯಾಗಿದ್ದ ತನ್ನ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.
ಪೊಲೀಸರ ಪ್ರಕಾರ ಮಂಗಳವಾರ ರಾತ್ರಿ ದಂಪತಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಕಮಲ್ ಊಟಮಾಡದೇ ಮಲಗಿಕೊಂಡಿದ್ದ. ಇಬ್ಬರು ಮಕ್ಕಳು ಮಲಗಿದ್ದರು. ಓರ್ವ ಬಾಲಕಿ ಟಿವಿ ನೋಡುತ್ತಿತ್ತು. ರಾತ್ರಿ 11ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಹತ್ಯೆಯ ಬಳಿಕ ಮನೆಯನ್ನು ಹೊರಗಿನಿಂದ ಲಾಕ್ ಮಾಡಿದ್ದ ಮಹಿಳೆ ರಕ್ತವನ್ನು ಮುಖದ ತುಂಬಾ ಮೆತ್ತಿಕೊಂಡಿದ್ದಳು. ಇದನ್ನು ಗಮನಿಸಿದ್ದ ನೆರೆಹೊರೆಯವರು ಹೋಳಿಯ ಬಣ್ಣವಿರಬೇಕೆಂದು ಭಾವಿಸಿದ್ದರು. ಮಂಗಳವಾರ ಬೆಳಗ್ಗೆ ಎಂದಿನಂತೆ ಬೇಗನೆ ಎದ್ದಿದ್ದ ಆ ಮಹಿಳೆ ಮನೆಯ ಗೋಡೆ ಹಾಗೂ ನೆಲದ ಮೇಲೆ ರಕ್ತದ ಕಲೆಯಿದ್ದರೂ ಅದನ್ನು ನಿರ್ಲಕ್ಷಿಸಿ ಮನೆಮಂದಿಗೆ ಉಪಹಾರ ತಯಾರಿಸಲು ತೊಡಗಿದ್ದರು. ಉಪಹಾರ ರೆಡಿ ಮಾಡಿ ತಂದೆಯನ್ನು ಎಬ್ಬಿಸುವಂತೆ ಮಕ್ಕಳಿಗೆ ತಿಳಿಸಿದ್ದಳು. ಮಕ್ಕಳೆಲ್ಲರೂ ಭಯದಿಂದ ಮನೆಯ ಮೂಲೆಯಲ್ಲಿ ಅವಿತುಕೊಂಡಿದ್ದರು.
ಕೊಲೆಯನ್ನು ಕಣ್ಣಾರೆ ಕಂಡಿದ್ದ ನಾಲ್ಕರ ಬಾಲಕಿ ಮನೆಯಿಂದ ಹೊರಹೋಗಿ ಮನೆಯ ಹತ್ತಿರವೇ ಇದ್ದ ಅಜ್ಜ-ಅಜ್ಜಿಯಂದಿರ ಬಳಿ ಘಟನೆಯನ್ನು ವಿವರಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಆಕೆಯ ಹೇಳಿಕೆಯನ್ನು ಪಡೆಯಲಾಗಿದೆ. ಒಂದು ವೇಳೆ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮಾನಸಿಕ ಅಸ್ವಸ್ಥೆ ಎಂದು ಸಾಬೀತಾದರೆ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಬಾಲಕಿ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







