ವಿಮಾನ ವಿಳಂಬಕ್ಕೆ ಸುಳ್ಳು ಕಾರಣ ನೀಡಿ ಸಿಕ್ಕಿ ಬಿದ್ದ ಇಂಡಿಗೋ ಪೈಲಟ್
ಹೊಸದಿಲ್ಲಿ, ಮಾ.8: ಕಳೆದ ವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದರಲ್ಲಿ ಇಂಡಿಗೋ ವಿಮಾನದ ಪೈಲಟ್ ಒಬ್ಬರು ವಿಮಾನದಲ್ಲಿ ಸಹ ಪೈಲಟ್ ಇರಲಿಲ್ಲವೆಂಬುದನ್ನು ಮರೆಮಾಚುವ ಸಲುವಾಗಿ ವಿಮಾನ ವಿಳಂಬವಾಗಲು ಏರ್ ಟ್ರಾಫಿಕ್ ಕಂಟ್ರೋಲರ್ ಕಾರಣವೆಂದು ಹೇಳಿ ನಂತರ ಸಿಕ್ಕಿ ಬಿದ್ದಿದ್ದಾರೆ.
ವಿಮಾನ ನಿಲ್ದಾಣಗಳ ಪ್ರಾಧಿಕಾರ ಈ ವಿಚಾರದ ಬಗ್ಗೆ ಇಂಡಿಗೋ ಏರ್ ಲೈನ್ಸ್ ಅನ್ನು ಪ್ರಶ್ನಿಸಿದ್ದು, ಇಂತಹ ಸುಳ್ಳು ಆರೋಪಗಳನ್ನು ಹೊರಿಸಬಾರದೆಂದು ತಾಕೀತು ಮಾಡಿದೆ.
ಈ ಬೆಳವಣಿಗೆಯ ನಂತರ ಇಂಡಿಗೋ ತನ್ನೆಲ್ಲಾ ಪೈಲಟ್ ಗಳಿಗೆ ಇಮೇಲ್ ಗಳನ್ನು ಕಳುಹಿಸಿ ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ನಡೆಸದಂತೆ ಎಚ್ಚರಿಸಿದೆ.
ಕಳೆದ ವಾರ ಚೆನ್ನೈ-ಮಧುರೈ ನಡುವೆ ಸಂಚರಿಸುವ ಇಂಡಿಗೋ ವಿಮಾನ 6ಇ-859ದ ಪ್ರಯಾಣ ಸಮಯವನ್ನು 1,225 ಗಂಟೆಗಳ ಬದಲಾಗಿ 1,145 ಗಂಟೆಗಳಿಗೆ ಬದಲಾಯಿಸಲಾಗಿತ್ತು ಹಾಗೂ ಈ ವಿಚಾರವನ್ನು ಪ್ರಯಾಣಿಕರಿಗೆ ಮೆಸೇಜ್ ಮೂಲಕವೂ ತಿಳಿಸಲಾಗಿತ್ತು.
ಆದರೆ ಏರ್ ಟ್ರಾಫಿಕ್ ಕಂಟ್ರೋಲರ್ ಅವರು ವಿಮಾನದ ಟೇಕ್ ಆಫ್ ಗೆ ಅನುಮತಿಸಲು ವಿಳಂಬಿಸುತ್ತಿದ್ದಾರೆ ಎಂದು ಮುಖ್ಯ ಪೈಲಟ್ ನಂತರ ಘೋಷಿಸಿದ್ದರು. ವಿಮಾನದ ಪ್ರಯಾಣಿಕರಲ್ಲಿ ಎಟಿಸಿ ಕೂಡ ಆ ಸಂದರ್ಭ ಇದ್ದರು ಎಂದು ಪೈಲಟ್ ಗೆ ತಿಳಿದಿರಲಿಲ್ಲ. ಅವರು ಕೂಡಲೇ ಚೆನ್ನೈ ಎಟಿಸಿ ಸಂಪರ್ಕಿಸಿ ವಿಳಂಬಕ್ಕೆ ಕಾರಣವೇನೆಂದು ಕೇಳಿದ್ದರು. ನಂತರ ಫ್ಲೈಟ್ ಅಟೆಂಡೆಂಟ್ ಮುಖಾಂತರ ಪೈಲಟ್ ಅವರನ್ನು ಎಟಿಸಿ ಭೇಟಿಯಾದಾಗ ಸಹ ಪೈಲಟ್ ತಮ್ಮ ಸೀಟಿನಲ್ಲಿ ಇರಲಿಲ್ಲವೆಂಬುದು ಪತ್ತೆಯಾಗಿತ್ತು. ಪೈಲಟ್ ನನ್ನು ಎಟಿಸಿ ಕೂಡಲೇ ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದ್ದು, ಪೈಲಟ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ.
ಆದರೆ ವಿಮಾನ ಕೇವಲ 3 ನಿಮಿಷ ವಿಳಂಬಗೊಂಡಿತ್ತೆಂದು ಇಂಡಿಗೋ ಹೇಳಿಕೊಂಡಿದೆ. ಗ್ರೌಂಡ್ ಫ್ರೀಕ್ವೆನ್ಸಿಯನ್ನು ಪೈಲಟ್ ಪರಿಶೀಲಿಸುತ್ತಿದ್ದಾಗ ಇನ್ನೊಂದು ವಿಮಾನದಲ್ಲಿ ರ್ಯಾಂಪ್ ಇರುವುದನ್ನು ಹಾಗೂ ವಾಯು ದಟ್ಟಣೆ ಇರುವುದನ್ನು ಗಮನಿಸಿ ವಿಮಾನ ವಿಳಂಬಗೊಳ್ಳುವುದೆಂದು ಪೈಲಟ್ ಮೊದಲು ಹೇಳಿದರೂ ನಂತರ ಎಟಿಸಿ ಅವರನ್ನು ಸಂಪರ್ಕಿಸಿದ್ದರಿಂದ ಎರಡನೆ ಘೋಷಣೆ ಮಾಡಿದರೆಂದು ಇಂಡಿಗೋ ಹೇಳಿಕೊಂಡಿದೆ.