ಹವಾನಿಯಂತ್ರಿತ ಜಾಕೆಟ್ ಬಿಡುಗಡೆ ಮಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಪಾಟ್ನಾ, ಮಾ.8: ಮಂಗಳವಾರ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಎ.ಸಿ. ಜಾಕೆಟ್ ಅಥವಾ ಹವಾನಿಯಂತ್ರಿತ ಜಾಕೆಟ್ ಅನ್ನು ಬಿಡುಗಡೆ ಮಾಡಿದ್ದಾರೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್. ಈ ಜಾಕೆಟ್ ಧರಿಸುವವರನ್ನು ಅದು ಎಲ್ಲಿಯೂ ಯಾವ ಸಮಯದಲ್ಲೂ ತಂಪಾಗಿ ಇಡುವುದೆಂದು ಹೇಳಲಾಗಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾಗಿರುವ ಸಿಂಗ್ ಈ ವಿಶೇಷ ಜಾಕೆಟ್ ಅನ್ನು ನವಾಡದಲ್ಲಿರುವ ತಮ್ಮ ಖಾನ್ವ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದ್ದಾರೆ. ‘‘ಖಾನ್ವಾದ ಹತ್ತಿ ಮತ್ತು ತಂತ್ರಜ್ಞಾನದ ಸಮ್ಮಿಳಿತದೊಂದಿಗೆ ಈ ಜಾಕೆಟ್ ತಯಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಲಿನನ್ ಜಾಕೆಟ್ ತನ್ನ ಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ. ಕೆಂಪು ಗುಂಡಿಯೊತ್ತಿದರೆ ಅದು ನಿಮ್ಮನ್ನು ಬೆಚ್ಚಗಿಟ್ಟರೆ, ಹಸಿರು ಗುಂಡಿಯೊತ್ತಿದ್ದಲ್ಲಿ ನಿಮ್ಮನ್ನು ತಂಪಾಗಿಡುತ್ತದೆ. ಈ ಜಾಕೆಟ್ ನಲ್ಲಿ ತಂಪು ಮತ್ತು ಬಿಸಿ ಗಾಳಿಯ ಫ್ಯಾನ್ ಇದ್ದು ಇವುಗಳು ಬ್ಯಾಟರಿ ಚಾಲಿತವಾಗಿವೆ. ಎಂಐಟಿ ಪದವೀಧರರೊಬ್ಬರು ಕ್ಲೈಮೇಟ್ ಗೇರ್ ತಂತ್ರಜ್ಞಾನದ ಮೂಲಕ ಈ ಜಾಕೆಟ್ ಅಭಿವೃದ್ಧಿಪಡಿಸಿದ್ದಾರೆ. ನ್ಯಾಶನಲ್ ಇನಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವಿದ್ಯಾರ್ಥಿಗಳು ಅದನ್ನು ವಿನ್ಯಾಸಗೊಳಿಸಿದ್ದಾರೆ. ಹಾಫ್ ಜಾಕೆಟ್ ಬೆಲೆ ರೂ. 18,000 ಆಗಿದ್ದರೆ, ತುಂಬು ತೋಳಿನ ಜಾಕೆಟ್ ಬೆಲೆ ಸುಮಾರು ರೂ.25,000 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಎಸಿ ಜಾಕೆಟ್ ಸದ್ಯದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಜಾಕೆಟ್ ದೇಶದ ಗಡಿ ಕಾಯುವ ಯೋಧರಿಗೆ ವರದಾನವಾಗಲಿದೆ ಎಂದು ಸಿಂಗ್ ಹೇಳಿದ್ದಾರೆ.