ವಕ್ಫ್ ಭೂ ಹಗರಣದ ತನಿಖೆಗೆ ಮಹಾರಾಷ್ಟ್ರ ಶಾಸಕರಿಬ್ಬರ ಆಗ್ರಹ
.jpeg)
ಮುಂಬೈ,ಮಾ.8: ಮುಘಲ್ ಚಕ್ರವರ್ತಿ ಶಹಾಜಹಾನ್ ನಾಸಿಕ ಜಿಲ್ಲೆಯ ಮಸೀದಿಯೊಂದಕ್ಕೆ ಉಂಬಳಿಯಾಗಿ ನೀಡಿದ್ದ ಭೂಮಿಯ ಒಂದು ಭಾಗವನ್ನು ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿಯೋರ್ವನ ಲಾಭಕ್ಕಾಗಿ ‘ವಕ್ಫೇತರ’ ಎಂದು ಘೋಷಿಸಲಾಗಿದೆ ಎಂದು ಶಾಸಕರಾದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ನಸೀಮ್ ಖಾನ್ ಮತ್ತು ಸಮಾಜವಾದಿ ಪಕ್ಷದ ನಾಯಕ ಅಬು ಅಸೀಮ್ ಆಜ್ಮಿ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಪಾದಿಸಿದ್ದಾರೆ. ಇದೊಂದು 2,500 ಕೋ.ರೂ.ಗಳ ಹಗರಣವೆಂದು ಬಣ್ಣಿಸಿರುವ ಅವರು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
ಕಳೆದ ತಿಂಗಳು ಔರಂಗಾಬಾದ್‌ನಲ್ಲಿರುವ ಮಹಾರಾಷ್ಟ್ರ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷೆ ನಸೀಮಾ ಬಾನೊ ಪಟೇಲ್ ಅವರನ್ನು 2015ರಲ್ಲಿ ವಕ್ಫ್ ಮಂಡಳಿಯ ಸಿಇಒ ಆಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡಾಗಿನಿಂದ ಅಧಿಕಾರ ದುರುಪಯೋಗದ ಆರೋಪದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಮಾನತುಗೊಳಿಸಿದ್ದರು. ಈ ಬಗ್ಗೆ ತನಿಖೆಗೂ ಸರಕಾರವು ಆದೇಶಿಸಿತ್ತು.
ರಾಜ್ಯ ಸರಕಾರವು ಪಾರದರ್ಶಕತೆಯ ಮಾತನ್ನಾಡುತ್ತಿದೆ. ಆದರೆ ಅದರ ಮೂಗಿನ ಕೆಳಗೇ ಹಗರಣ ನಡೆದರೂ ಅದಕ್ಕೆ ಗೊತ್ತಾಗುತ್ತಿಲ್ಲ ಎಂದು ಹೇಳಿದ ಖಾನ್, ಈ ಬಗ್ಗೆ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ನಾಸಿಕ್ ಜಿಲ್ಲೆಯ ಬೋರವಾಡಿಯ ಮಸ್ಜಿದ್ ದೂಧದರಿ ಕಟ್ರಾಕ್ಕೆ ಶಹಾಜಹಾನ್ 85 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದು, ಈ ಪೈಕಿ 55 ಎಕರೆಯನ್ನು ಈಗ ವಕ್ಫ್‌ಗೆ ಸೇರಿರದ ಭೂಮಿಯೆಂದು ಘೋಷಿಸಲಾಗಿದೆ ಎಂದ ಖಾನ್, ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕಳೆದ ವರ್ಷ ಈ ವಕ್ಫ್ ಆಸ್ತಿಯ ಮೇಲೆ ಹಕ್ಕು ಮಂಡಿಸಿದ್ದ ಎಂದು ತಿಳಿಸಿದರು.
ಈ ಬಗ್ಗೆ ವಿಚಾರಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಆಗ ವಕ್ಫ್ ಸಿಇಒ ಆಗಿದ್ದ ನಸೀಮಾ ಬಾನೊ ಪಟೇಲ್‌ಗೆ ಸೂಚಿಸಿತ್ತಾದರೂ, ಹಾಗೆ ಮಾಡಲು ತನಗೆ ಅಧಿಕಾರವಿಲ್ಲ ಎಂದು ಆಕೆ ಪ್ರಮಾಣಪತ್ರ ಸಲ್ಲಿಸಿದ್ದರು.
ವಕ್ಫ್ ಪರ ವಕೀಲರು ಹೆಚ್ಚಿನ ಸಮಯಾವಕಾಶವನ್ನು ಕೋರಿದ್ದರು ಮತ್ತು ಬಳಿಕ ಆಸ್ತಿಯನ್ನು ‘ವಕ್ಫೇತರ ’ಎಂದು ವರ್ಗೀಕರಿಸಲಾಗಿತ್ತು. ಮಸೀದಿಗೆ ಹೊಂದಿಕೊಂಡಿರುವ 700 ಎಕರೆ ಜಾಗದಲ್ಲಿ ಬೃಹತ್ ಟೌನ್‌ಷಿಪ್ ಯೋಜನೆಯೊಂದು ತಲೆಯೆತ್ತುತ್ತಿದೆ ಮತ್ತು ಬಿಲ್ಡರ್‌ನ ಲಾಭಕ್ಕಾಗಿ 55 ಎಕರೆ ವಕ್ಫ್ ಭೂಮಿಯನ್ನು ‘ವಕ್ಫೇತರ ಭೂಮಿ’ ಎಂದು ಪರಿವರ್ತಿಸಲಾಗಿದೆ ಎಂದು ಖಾನ್ ಆರೋಪಿಸಿದರು.
ಶಜಾಜಹಾನ್ ಕಾಲದಿಂದಲೂ ಇರುವ ರಾಜಮುದ್ರೆಯಿರುವ ಆಸ್ತಿ ದಾಖಲೆಗಳು, ಮರಾಠರ ಆಡಳಿತದಲ್ಲಿ ಲೀಸ್‌ನ್ನು ನವೀಕರಿಸಿದ ದಾಖಲೆ ಮತ್ತು ಆಸ್ತಿಯ ಪೂರ್ವಚರಿತ್ರೆಯನ್ನು ಪ್ರಮಾಣೀಕರಿಸಿರುವ 1927ರ ಬ್ರಿಟಿಷ್ ಸರಕಾರಿ ಗೆಝೆಟ್‌ಗಳು ಸರಕಾರದ ಬಳಿಯಲ್ಲಿವೆ.