ಶಿವಮೊಗ್ಗ: ಗುಂಪು ದಾಳಿಯಲ್ಲಿ ಬರ್ಬರ ಹತ್ಯೆಯಾದ ರೌಡಿ ಶೀಟರ್

ಶಿವಮೊಗ್ಗ, ಮಾ. 8: ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಈರ್ವರು ಸಹಚರರನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯ ಬಸವನಗಂಗೂರು ರಸ್ತೆಯ ವಿನಾಯಕ ಲೇಔಟ್ ಸಮೀಪ ಮಂಗಳವಾರ ರಾತ್ರಿ ನಡೆದಿದೆ.
ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಯಾದ ಗಿರೀಶ್ (26) ಹತ್ಯೆಗೀಡಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ತೀವ್ರ ರಕ್ತಸ್ರಾವಗೊಂಡಿದ್ದ ಗಿರೀಶ್‌ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಈತನ ಸ್ನೇಹಿತರಾದ ಕಾಂತರಾಜ್ (25) ಹಾಗೂ ಸಂದೇಶ್ (26) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹತ್ಯೆ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಕಟ್ಟೆ ಬಡಾವಣೆಯವರಾದ ಅವಿನಾಶ್, ಪುಟ್ಟ, ಶಿವು, ಪ್ರತಾಪ್, ಅಜಿತ್, ಮೈಲಾರಿ, ಬಸಪ್ಪ, ವಾಗೀಶ್, ಶಂಕರ ಹಾಗೂ ಇತರರ ವಿರುದ್ದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್, ಸಬ್ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.
ಹತ್ಯೆಯಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳನ್ನು ಬುಧವಾರ ವಿನೋಬನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ತಲೆಮರೆಸಿಕೊಂಡ ಇತರೆ ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆ ಹಿನ್ನೆಲೆ:
ಹತ್ಯೆಗೀಡಾದ ಗಿರೀಶ್‌ನು ಮಂಗಳವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಸ್ನೇಹಿತರಾದ ಕಾಂತರಾಜ್, ಸಂದೇಶ್ ಹಾಗೂ ಮತ್ತೀತರರೊಂದಿಗೆ ಮದ್ಯದಂಗಡಿಯಿಂದ ಮದ್ಯ ಖರೀದಿಸಿ ವಿನಾಯಕ ಲೇಔಟ್‌ನಲ್ಲಿ ಮದ್ಯ ಸೇವಿಸುತ್ತಿದ್ದ. ಈ ವೇಳೆ ಮೊಬೈಲ್ ಪೋನ್ ಸಂಭಾಷಣೆಯಲ್ಲಿ ಗಿರೀಶ್ ಹಾಗೂ ಆರೋಪಿ ಅವಿನಾಶ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದಾದ ಕೆಲ ನಿಮಿಷಗಳಲ್ಲಿಯೇ ಆರೋಪಿ ಅವಿನಾಶ್ ಹಾಗೂ ಆತನ ಸಹಚರರು ಆಟೋ ಹಾಗೂ ಮೂರು ಬೈಕ್‌ಗಳಲ್ಲಿ ಗಿರೀಶ್ ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ. ಮಾರಕಾಸ್ತ್ರ, ದೊಣ್ಣೆ, ಕಲ್ಲುಗಳಿಂದ ಗಿರೀಶ್ ಮೇಲೆ ಮನಸೋಇಚ್ಚೆ ಹಲ್ಲೆ ನಡೆಸಿದ್ದಾರೆ. ಗಿರೀಶ್ ರಕ್ಷಣೆಗೆ ಮುಂದಾದ ಆತನ ಸ್ನೇಹಿತರಾದ ಕಾಂತರಾಜ್, ಸಂದೇಶ್ ಮೇಲೂ ಮಾರಕಾಸ್ತ್ರ ಹಾಗೂ ದೊಣ್ಣೆಯಿಂದ ದಾಳಿ ಮಾಡಿ ತೆರಳಿದೆ.
ವೈಷಮ್ಯ:
ಇತ್ತೀಚೆಗೆ ಬೊಮ್ಮನಕಟ್ಟೆ ಆಟೋ ಸ್ಟ್ಯಾಂಡ್ ಬಳಿ ಕ್ಷುಲ್ಲಕ ಕಾರಣಕ್ಕೆ ಹತ್ಯೆಗೀಡಾದ ಗಿರೀಶ್ ಹಾಗೂ ಆರೋಪಿ ಅವಿನಾಶ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೈಷಮ್ಯದ ಹಿನ್ನೆಲೆಯಲ್ಲಿಯೇ ಈ ಹತ್ಯೆ ನಡೆದಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ದರೋಡೆ, ಸುಲಿಗೆ ಕೃತ್ಯಗಳಲ್ಲಿ ಭಾಗಿ:
ಹತ್ಯೆಗೀಡಾದ ಆರೋಪಿ ಗಿರೀಶ್‌ನು ಬೊಮ್ಮನಕಟ್ಟೆ ಬಡಾವಣೆಯಲ್ಲಿ ತನ್ನ ಸಹಚರರ ಜೊತೆ ಸೇರಿಕೊಂಡು ದರೋಡೆ, ಸುಲಿಗೆ ಕೃತ್ಯಗಳು ಸೇರಿದಂತೆ ಕೆಲ ಗಲಾಟೆಗಳಲ್ಲಿ ಭಾಗಿಯಾಗಿದ್ದ. ಮಾರಕಾಸ್ತ್ರಗಳ ಮೂಲಕ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಗಿರೀಶ್‌ನ ವಿರುದ್ದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಕ್ರಿಮಿನಲ್ಸ್‌ಗಳ ಉಪಟಳಕ್ಕೆ ನಾಗರಿಕರು ತತ್ತರ!
ಇತ್ತೀಚಿನ ವರ್ಷಗಳಲ್ಲಿ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಕ್ರಿಮಿನಲ್ಸ್‌ಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಕೊಲೆ, ಸುಲಿಗೆ, ದರೋಡೆ, ಕಳ್ಳತನ ಸರ್ವೇಸಾಮಾನ್ಯ ಎಂಬಂತಾಗಿದೆ. ರಾತ್ರಿ ವೇಳೆ ಬಡಾವಣೆಯ ಕೆಲ ಪ್ರದೇಶಗಳಲ್ಲಿ ಓರ್ವರೇ ಓಡಾಡದಂತಹ ಪರಿಸ್ಥಿತಿಯಿದ್ದು, ಕ್ರಿಮಿನಲ್ಸ್‌ಗಳ ಹಾವಳಿಗೆ ಸ್ಥಳೀಯ ನಾಗರೀಕರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ರೌಡಿಗಳು, ಪುಂಡ-ಪೋಕರಿಗಳು, ದರೋಡೆಕೋರರು, ಕಳ್ಳರ ಹಾವಳಿ ವಿಪರೀತವಾಗಿದೆ. ಇವರನ್ನು ಹೇಳುವವರು ಕೇಳುವವರ್ಯಾರು ಇಲ್ಲದಂತಾಗಿದೆ. ನಾಗರೀಕರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ತಕ್ಷಣವೇ ಪೊಲೀಸ್ ಇಲಾಖೆ ಕ್ರಿಮಿನಲ್ಸ್‌ಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ, ನಾಗರೀಕರು ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕುಎಂದು ಬಡಾವಣೆಯ ಮಹಿಳೆಯೋರ್ವರು ಮನವಿ ಮಾಡುತ್ತಾರೆ.







