ಕೇವಲ ಐದು ತಿಂಗಳಲ್ಲಿ 23 ಪಟ್ಟು ಹೆಚ್ಚಿದ ಚಂದ್ರಬಾಬು ಪುತ್ರನ ಆಸ್ತಿ!

ಹೈದರಾಬಾದ್,ಮಾ.8: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ತೆಲುಗು ದೇಶಂ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಆಸ್ತಿಗಳ ಮೌಲ್ಯ ಕೇವಲ ಐದೇ ತಿಂಗಳುಗಳಲ್ಲಿ 23 ಪಟ್ಟುಗಳಷ್ಟು ಹೆಚ್ಚಾಗಿದೆ. ಅವರೀಗ 330 ಕೋ.ರೂ.ಮೌಲ್ಯದ ಆಸ್ತಿಗಳ ಒಡೆಯ!
ಲೋಕೇಶ್ ಸೋಮವಾರ ಎಂಎಲ್‌ಸಿ ಸ್ಥಾನಕ್ಕೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ತನ್ನ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 330 ಕೋ.ರೂ.ಗಳೆಂದು ಘೋಷಿಸಿದ್ದಾರೆ. ಇವುಗಳಲ್ಲಿ 273.84 ಕೋ.ರೂ.ಮೌಲ್ಯದ ಹೆರಿಟೇಜ್ ಫುಡ್ಸ್‌ನ ಶೇರುಗಳು, 18 ಕೋ.ರೂ.ಗಳ ಸ್ಥಿರಾಸ್ತಿಗಳು ಮತ್ತು 38.52 ಕೋ.ರೂ. ಮೌಲ್ಯದ ಹಿರಿಯರಿಂದ ಬಂದಿರುವ ಆಸ್ತಿಗಳು ಸೇರಿವೆ. ಜೊತೆಗೆ 6.27 ಕೋ.ರೂ.ಗಳ ಸಾಲವನ್ನೂ ಅವರು ಹೊಂದಿದ್ದಾರೆ.
ಲೋಕೇಶ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಗಳ ವಿವರಗಳಿಗೂ 2016,ಅ.19ರಂದು ಅವರು ಬಹಿರಂಗಗೊಳಿಸಿದ್ದ ಆಸ್ತಿಗಳ ವಿವರಗಳಿಗೂ ಅಜಗಜಾಂತರವಿದೆ. ಪ್ರತಿ ವರ್ಷ ತನ್ನ ಕುಟುಂಬದ ಆಸ್ತಿ ವಿವರಗಳನ್ನು ಬಹಿರಂಗ ಗೊಳಿಸುವ ‘ಪಾರದರ್ಶಕತೆ ’ಯ ಪ್ರಕ್ರಿಯೆಯಲ್ಲಿ 2.52 ಕೋ.ರೂ.ವೌಲ್ಯದ ಹೆರಿಟೇಜ್ ಶೇರುಗಳು, 1.64 ಕೋ.ರೂ.ಮೌಲ್ಯದ ಇತರ ಕಂಪನಿಗಳ ಶೇರುಗಳು ಮತ್ತು 93 ಲ.ರೂ. ಮೌಲ್ಯದ ಕಾರು ಸೇರಿದಂತೆ ತನ್ನ ಆಸ್ತಿಗಳ ಒಟ್ಟು ವೌಲ್ಯ ಕೇವಲ 14.50 ಕೋ.ರೂ.ಗಳೆಂದು ಲೋಕೇಶ್ ಘೋಷಿಸಿದ್ದರು. ಅಲ್ಲದೆ ತಾನು 6.35 ಕೋ.ರೂ.ಗಳ ಸಾಲವನ್ನೂ ಹೊಂದಿದ್ದೇನೆ ಎಂದು ತಿಳಿಸಿದ್ದರು.
ವಾಸ್ತವದಲ್ಲಿ ಹೆರಿಟೇಜ್ ಫುಡ್ಸ್ ಕಳೆದ ವರ್ಷದ ನ.8ರಂದು ತನ್ನ ಚಿಲ್ಲರೆ ವ್ಯಾಪಾರ ವಿಭಾಗವನ್ನು ಕಿಶೋರ ಬಿಯಾನಿಯವರ ಫ್ಯೂಚರ್ ರಿಟೇಲ್ ಲಿ.ಗೆ ಮಾರಾಟ ಮಾಡಿದ್ದು, ಅದರಲ್ಲಿಯ 295 ಕೋ.ರೂ.ವೌಲ್ಯದ ಕೇವಲ ಶೇ.3.65ರಷ್ಟು ಶೇರುಗಳನ್ನು ಮಾತ್ರ ಉಳಿಸಿಕೊಂಡಿತ್ತು. ಹೀಗಿದ್ದರೂ,ಲೋಕೇಶ್ ಬಳಿಯಿದ್ದ ಹೆರಿಟೇಜ್ ಫುಡ್ಸ್‌ನ ಶೇರುಗಳ ವೌಲ್ಯ ಐದೇ ತಿಂಗಳಲ್ಲಿ 2.52 ಕೋ.ರೂ.ನಿಂದ 273.84 ಕೋ.ರೂ.ಗೇರಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ಲೋಕೇಶ್ ತನ್ನ ಪತ್ನಿ ನಾರಾ ಬ್ರಹ್ಮಣಿ ಮತ್ತು ಎರಡರ ಹರೆಯದ ಪುತ್ರ ದೇವಾಂಶ್ ಒಡೆತನದ ಆಸ್ತಿಗಳನ್ನೂ ಘೋಷಿಸಿದ್ದಾರೆ. ಅಕ್ಟೋಬರ್‌ನಲ್ಲಿ ಬ್ರಹ್ಮಣಿಯವರ ಆಸ್ತಿಗಳ ಒಟ್ಟು ವೌಲ್ಯ 5.38 ಕೋ.ರೂ. ಮತ್ತು ದೇವಾಂಶ್ ಆಸ್ತಿ ವೌಲ್ಯ 11.70 ಕೋ.ರೂ.ಗಳೆಂದು ಪ್ರಕಟಿಸಲಾಗಿತ್ತು. ಆದರೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ಬ್ರಹ್ಮಣಿ ಆಸ್ತಿಯ ವೌಲ್ಯವನ್ನು 28 ಕೋ.ರೂ.ಗಳೆಂದು ತೋರಿಸಲಾಗಿದ್ದರೆ, ದೇವಾಂಶ್ ಆಸ್ತಿ ವೌಲ್ಯ ಹೆಚ್ಚುಕಡಿಮೆ ಮೊದಲಿನಷ್ಟೇ ಇದೆ.ಅಕ್ಟೋಬರ್‌ನಲ್ಲಿ ಲೋಕೇಶ್ ಘೋಷಿಸಿದ್ದಂತೆ ತಂದೆ ಚಂದ್ರಬಾಬು ನಾಯ್ಡು 67 ಲ.ರೂ.ಗಳ ಆಸ್ತಿಯನ್ನು ಹೊಂದಿದ್ದರೆ, ಹೆರಿಟೇಜ್ ಫುಡ್ಸ್‌ನ ಆಡಳಿತ ನಿರ್ದೇಶಕಿಯಾಗಿರುವ ತಾಯಿ ಭುವನೇಶ್ವರಿ 33.66 ಕೋ.ರೂ.ಮೌಲ್ಯದ ಆಸ್ತಿಯ ಒಡತಿಯಾಗಿದ್ದರು.







