ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ ಬಹಿಷ್ಕರಿಸಿದರೆ ಜೈಲು ಶಿಕ್ಷೆ: ಸಚಿವ ತನ್ವೀರ್ ಸೇಠ್ ಖಡಕ್ ಎಚ್ಚರಿಕೆ
ಮಾ.9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ಬೆಂಗಳೂರು, ಮಾ. 8: ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ (ಮಾ.9) ಆರಂಭಗೊಳ್ಳಲಿದ್ದು, ಗೊಂದಲಕ್ಕೆ ಅವಕಾಶವಿಲ್ಲದೆ ಸುಸೂತ್ರವಾಗಿ ಪರೀಕ್ಷೆ ನಡೆಯಲಿದೆ ಎಂದು ಅಭಯ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಪರೀಕ್ಷಾ ಕರ್ತವ್ಯ, ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೀಕ್ಷಾ ಕರ್ತವ್ಯ ಮತ್ತು ಮೌಲ್ಯಮಾಪನ ಬಹಿಷ್ಕರಿಸುವ ಶಿಕ್ಷಕರು ಮತ್ತು ಉಪನ್ಯಾಸಕರ ವಿರುದ್ಧ ಶಿಕ್ಷಣ ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲದೆ, ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದರು.
19ಮಂದಿ ತೃತೀಯ ಲಿಂಗಿಗಳು, 3,48,562 ಬಾಲಕರು, 3,35,909 ಬಾಲಕಿಯರು ಸೇರಿದಂತೆ ಒಟ್ಟು 6,84,490 ಅಭ್ಯರ್ಥಿಗಳು ಪರೀಕ್ಷೆಗೆ ಕೂರಲಿದ್ದಾರೆ. ಒಟ್ಟು 998 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಆ ಪೈಕಿ 38 ಅತಿಸೂಕ್ಷ್ಮ, 103 ಸೂಕ್ಷ್ಮ, 857 ಸಾಮಾನ್ಯ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಯಾರೂ ಚೆಲ್ಲಾಟ ಆಡಬಾರದು. ಅದಕ್ಕೆ ಸರಕಾರ, ಶಿಕ್ಷಣ ಇಲಾಖೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಮುನ್ನಚ್ಚರಿಕೆ ಕೈಗೊಂಡಿದ್ದು, ವಿದ್ಯಾರ್ಥಿಗಳು-ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದರು.
ಎಲ್ಲ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪರೀಕ್ಷಾ ಕೇಂದ್ರದ ವ್ಯಾಪ್ತಿಯ ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಲು ಆದೇಶ ಹೊರಡಿಸಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಎಲ್ಲ ಜಿಲ್ಲಾ ಖಜಾನೆಗಳನ್ನು ರವಾನಿಸಲಾಗಿದೆ. ಖಜಾನೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಿದ್ದು, ನಿಗದಿತ ವ್ಯಕ್ತಿಯೇ ಪ್ರಶ್ನೆ ಪತ್ರಿಕೆ ಸ್ವೀಕರಿಸಬೇಕು. ಪ್ರಶ್ನೆ ಪತ್ರಿಕೆ ಸಿದ್ಧತೆ, ಮುದ್ರಣ, ರವಾನೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದರು.
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮದಲ್ಲಿ ತೊಡಗುವವರ ವಿರುದ್ಧ ಶಿಕ್ಷಣ ಕಾಯ್ದೆಯನ್ವಯ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದ ಅವರು, 15 ನಿಮಿಷ ಮೊದಲೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಬೇಕು. 5 ನಿಮಿಷ ತಡವಾಗಿ ಬರುವವರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ ಎಂದರು.
ಕೇಂದ್ರ ಬದಲು:
ನಕಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವ ದೃಷ್ಟಿಯಿಂದ ವಿದ್ಯಾರ್ಥಿಗಳು ಕಲಿತ ಶಾಲೆಗಳಲ್ಲಿ ಪರೀಕ್ಷೆ ಬರೆಯದಂತೆ ಪರೀಕ್ಷೆ ಕೇಂದ್ರಗಳನ್ನು ಬದಲಾವಣೆ ಮಾಡಿದ್ದು, ಶಿಕ್ಷಣ ವೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಚಕ್ಷಣಾ ದಳ, ಸಂಚಾರ ವಿಚಕ್ಷಣಾ ದಳಗಳನ್ನು ಜಿಲ್ಲಾ ಮತ್ತು ತಾಲೂಕು ವಾರು ರಚಿಸಲಾಗಿದೆ ಎಂದ ಅವರು, ಪರೀಕ್ಷಾ ಕರ್ತವ್ಯಕ್ಕೆ ಹಾಜರಿರುವ ಸಿಬ್ಬಂದಿ ಮತ್ತು ವೀಕ್ಷಕರನ್ನು ಆಯಾ ಶಾಲೆಗಳನ್ನು ಹೊರತು ಬೇರೆ ಕಡೆ ನಿಯೋಜನೆ ಮಾಡಲಾಗಿದೆ. ಮೊದಲ ಬಾರಿಗೆ ಪರೀಕ್ಷೆ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದೆ ಎಂದು ಹೇಳಿದರು.
ಶಿಕ್ಷಕರು ಮತ್ತು ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧ. ಆ ನಿಟ್ಟಿನಲ್ಲಿ ಏಳನೆ ವೇತನ ಆಯೋಗದ ಶಿಫಾರಸ್ಸನ್ನು ಆಧರಿಸಿ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸಲಾಗುವುದು. ಈಗಾಗಲೇ ಉಪನ್ಯಾಸಕರು ಮತ್ತು ಶಿಕ್ಷಕರ ಭತ್ತೆ ಹೆಚ್ಚಳ ಮಾಡಲಾಗಿದೆೞ-ತನ್ವೀರ್ ಸೇಠ್







