ಉಚಿತ ಎಲ್‌ಪಿಜಿ ಸಂಪರ್ಕ ಪಡೆಯಲು ಬಡಮಹಿಳೆಯರಿಗೆ ಆಧಾರ್ ಕಡ್ಡಾಯ

ಹೊಸದಿಲ್ಲಿ,ಮಾ.8: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡಿಗೆ ಅನಿಲ (ಎಲ್‌ಪಿಜಿ) ಸಂಪರ್ಕವನ್ನು ಪಡೆಯಲು ಬಡಮಹಿಳೆಯರು ಆಧಾರ್ ಕಾರ್ಡ್ ಹೊಂದಿರುವುದನ್ನು ಸರಕಾರವು ಕಡ್ಡಾಯಗೊಳಿಸಿದೆ.
ಸರಕಾರವು ಕಳೆದ ವರ್ಷ ಆರಂಭಿಸಿರುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಮೂರು ವರ್ಷಗಳಲ್ಲಿ ಐದು ಕೋಟಿ ಬಡಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿ ಹೊಂದಿದೆ.
ಪಿಎಂಯುವೈ ಅಡಿ ಉಚಿತ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಬಯಸಿರುವ ಫಲಾನುಭವಿಗಳು ಆಧಾರ್ ಕಾರ್ಡ್‌ನ್ನು ಸಲ್ಲಿಸತಕ್ಕದ್ದು ಎಂದು ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಗೆಜೆಟ್ ಅಧಿಸೂಚನೆಯು ತಿಳಿಸಿದೆ.
ಆಧಾರ್ ಸಂಖ್ಯೆಯನ್ನು ಹೊಂದಿರದ ಬಡಮಹಿಳೆಯರಿಗೆ ಮೇ 31ರೊಳಗೆ ಅದಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಆಧಾರ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಫಲಾನುಭವಿಗಳು ಆಧಾರ್ ನೋಂದಣಿ ಗುರುತು ಚೀಟಿ ಆಥವಾ ಅರ್ಜಿ ಸಲ್ಲಿಸಿದ ಬಗ್ಗೆ ಹಿಂಬರಹದೊಂದಿಗೆ ಭಾವಚಿತ್ರ ಸಹಿತ ಬ್ಯಾಂಕ್ ಪಾಸ್‌ಪುಸ್ತಕ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾನ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌ನಂತಹ ಸರಕಾರದ ಯಾವುದೇ ಗುರುತು ಚೀಟಿಯನ್ನು ಲಗತ್ತಿಸಿ ಉಚಿತ ಎಲ್‌ಪಿಜಿ ಸಂಪರ್ಕಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಧಾರ್‌ಗಾಗಿ ಫಲಾನುಭವಿಗಳ ನೋಂದಣಿಗೆ ಅನುಕೂಲ ಕಲ್ಪಿಸುವಂತೆ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳಿಗೆ ನಿರ್ದೇಶನಾಲಯವು ಸೂಚಿಸಿದೆ. ಸರಕಾರವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎಲ್‌ಪಿಜಿ ಸಬ್ಸಿಡಿಯನ್ನು ಪಡೆಯಲು ಆಧಾರ್ ಅನ್ನು ಕಡ್ಡಾಯಗೊಳಿಸಿತ್ತು.







