ನೋಟು ಅಮಾನ್ಯೀಕರಣದಿಂದ ಕೃಷಿಕೂಲಿಕಾರರಿಗೆ ಸಂಕಷ್ಟ: ರಾಜ್ಯಸಭೆ ಮಾಜಿ ಸದಸ್ಯ ಎ.ವಿಜಯರಾಘವನ್ ಆತಂಕ
ರಾಜ್ಯಮಟ್ಟದ ಮಹಿಳಾ ಕೃಷಿ ಕೂಲಿಕಾರರ ಸಮಾವೇಶ

ಮಂಡ್ಯ, ಮಾ.8: ದೊಡ್ಡ ಮೊತ್ತದ ನೋಟುಗಳ ಅಮಾನ್ಯೀಕರಣದಿಂದ ಕೃಷಿ ಕೂಲಿಕಾರರು ಹಾಗೂ ಮಹಿಳೆಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಎ.ವಿಜಯರಾಘವನ್ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಕಲಾಮಂದಿರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಆಯೋಜಿಸಿರುವ ಎರಡು ದಿನಗಳ ಮಹಿಳಾ ಕೃಷಿ ಕೂಲಿಕಾರರ ರಾಜ್ಯಮಟ್ಟದ 3ನೆ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಾವುದೇ ಮುಂದಾಲೋಚನೆ ಮಾಡದೆ ನೋಟು ಅಮಾನ್ಯೀಕರಣವನ್ನು ಮಾಡಿದ ಕೇಂದ್ರ ಸರಕಾರದ ಕ್ರಮದಿಂದ ಕಷ್ಟಕಾಲಕ್ಕೆಂದು ಮಹಿಳೆಯರು ಕೂಡಿಟ್ಟಿದ್ದ ಹಣ ಉಳ್ಳವರ ಪಾಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪುಹಣ ಹೊರತೆಗೆಯುತ್ತೇನೆಂಬ ನೆಪ ಮಾಡಿಕೊಂಡು ಬಡವರ ಕಿಸೆಗೆ ಕೈಹಾಕಿದ ನರೇಂದ್ರಮೋದಿ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದರು. ವಿದೇಶೀ ಬ್ಯಾಂಕ್‌ಗಳಲ್ಲಿರುವ ಕೋಟ್ಯಂತರ ಕಪ್ಪುಹಣದಲ್ಲಿ ನಯಾಪೈಸೆ ತರಲಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರು, ಕೃಷಿಕರು, ಕಾರ್ಮಿಕರನ್ನು ಕಡೆಗಣಿಸಿದೆ. ಸರಕಾರದ ಕಾರ್ಯಕ್ರಮಗಳ ಹಿಂದೆ ಕಾರ್ಪೋರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಅಜೆಂಡಾ ಇದೆ ಎಂದು ಅವರು ಆರೋಪಿಸಿದರು.
ಉದ್ಯಮಿಗಳು ಸೇರಿದಂತೆ ದೇಶದ ಹಲವು ಶ್ರೀಮಂತರ ಕೋಟ್ಯಂತರ ಸಾಲವನ್ನು ಯಾವುದೇ ಯೋಚನೆ ಮಾಡದೆ ಮನ್ನಾಮಾಡುವ ಸರಕಾರ, ಸಂಕಷ್ಟದಲ್ಲಿರುವ ಕೃಷಿಕರ, ಕೃಷಿಕೂಲಿಕಾರರ ಸಣ್ಣಮೊತ್ತದ ಸಾಲಮನ್ನಾ ಮಾಡಲು ಆಗುತ್ತಿಲ್ಲ. ಇದು ಕೇಂದ್ರ ಸರಕಾರ ಉಳ್ಳವರ ಪರವಾದ ಸರಕಾರವೆಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರು, ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿವೆ. ಆಹಾರ ಭದ್ರತೆ ಕಾಯ್ದೆಯಡಿ ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ ನೀಡಬೇಕು. ಆದರೆ, ಗ್ರಾಮೀಣ ಮಹಿಳೆಯರು ಪೌಷ್ಠಿಕ ಆಹಾರದ ಕೊರತೆಯಿಂದ ನರಳುತ್ತಿದ್ದಾರೆ ಎಂದು ಅವರು ಹೇಳಿದರು.
ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಅಗತ್ಯವಿರುವವರಿಗೆ ಕೂಲಿ ನೀಡುತ್ತಿಲ್ಲ. ಲಕ್ಷಾಂತರ ರೂ. ಕೂಲಿ ಬಾಕಿ ಉಳಿದುಕೊಂಡಿದೆ ಎಂದು ಅವರು ಕಿಡಿಕಾರಿದರು.
ಸರಕಾರಗಳು ಆಹಾರ ಭದ್ರತಾ ಕಾಯ್ದೆಯಡಿ ಎಲ್ಲರಿಗೂ ಪೌಷ್ಠಿಕ ಆಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 350 ರೂ. ಕೂಲಿ ನೀಡಬೇಕು, ಬಾಕಿ ಕೂಲಿ ಹಣವನ್ನು ಕೂಡಲೇ ಪಾವತಿಸಬೇಕು. ಬಿಪಿಎಲ್ ಕುಟುಂಬಕ್ಕೆ 2 ರೂ.ನಂತೆ 30 ಕೆ.ಜಿ. ಅಕ್ಕಿ ವಿತರಿಸಬೇಕು. ಬರದಿಂದ ತತ್ತರಿಸಿರುವ ರೈತರು, ಕೃಷಿಕೂಲಿಕಾರರಿಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಮಾವೇಶ ಉದ್ಘಾಟಿಸಿದ ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯ ಉಪನ್ಯಾಸಕಿ ಡಾ.ವಿ.ಡಿ.ಸುವರ್ಣ, ಶಿಕ್ಷಣ ಪಡೆಯುವುದರ ಜತೆಗೆ, ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದು ಸಲಹೆ ಮಾಡಿದರು.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷೆ ಹಾಗೂ ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಹಿಳಾ ಕೃಷಿಕೂಲಿಕಾರರ ರಾಜ್ಯ ಸಂಚಾಲಕಿ ಮಲ್ಲಮ್ಮ ಕೂಡ್ಲಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ, ಕೆ.ಬಸವರಾಜು, ಸರೋಜಮ್ಮ, ಎನ್.ಸುರೇಂದ್ರ, ಕೆ.ಹನುಮೇಗೌಡ, ಟಿಎಲ್.ಕೃಷ್ಣೇಗೌಡ, ಇತರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರಿನ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಕಲಾಮಂದಿರದವರೆಗೆ ಆಯೋಜಿಸಿದ್ದ ಜಾನಪದ ಕಲಾತಂಡಗಳ ಜತೆ ಭಾಗವಹಿಸಿದ್ದ ಮಹಿಳಾ ಕೃಷಿಕೂಲಿಕಾರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.







